ನವದೆಹಲಿ: ಚಲಾಯಿಸಿದ ಮತವು ವಿದ್ಯುನ್ಮಾನ ಮತ ಯಂತ್ರದಲ್ಲಿ (ಇವಿಎಂ) 'ದಾಖಲಾಗಿದೆ ಎಂದು ಪರಿಗಣಿಸಲ್ಪಟ್ಟಿದೆ' ಎಂಬ ಕುರಿತು ಮರುಪರಿಶೀಲನೆ ಮಾಡಲು ಮತದಾರರಿಗೆ ಅವಕಾಶ ನೀಡುವಂತೆ ಕೋರಿ ಎನ್‌ಜಿಒ ಒಂದು ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ(ಇ.ಸಿ) ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮೂರು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆಯೂ ಆಯೋಗಕ್ಕೆ ಕೋರ್ಟ್ ಹೇಳಿದೆ.
'ಈ ಪ್ರಕರಣವು ಅತಿಯಾದ ಸಂದೇಹಕ್ಕೆ ಸಂಬಂಧಿಸಿದ ಪ್ರಕರಣದಂತೆ ಕಾಣುತ್ತಿದೆ ಎಂದು ನಾವು ಭಾವಿಸುತ್ತೇವೆ. ನಿರ್ದಿಷ್ಟ ವಿಷಯಗಳಲ್ಲಿ ನಾವು ಅತಿಯಾಗಿ ಸಂದೇಹ ಪಡಬೇಕಾಗುತ್ತದೆ. ಇಂತಹ ಸಂದೇಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇ.ಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ. ಹೀಗಾಗಿ ಇ.ಸಿಗೆ ನೋಟಿಸ್ ನೀಡಿಲ್ಲ. ಬದಲಾಗಿ ಅರ್ಜಿಯ ಪ್ರತಿಯನ್ನು ನೀಡುವಂತೆ ಹೇಳಲಾಗಿದೆ' ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠವು ಹೇಳಿತು.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಎಂಬ ಎನ್‌ಜಿಒ ಈ ಅರ್ಜಿ ಸಲ್ಲಿಸಿತ್ತು.