ವಯನಾಡು: ತಂದೆಯ ಜತೆ ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ವಯನಾಡಿನ ಅಂಬಲವ್ಯಾಲದಲ್ಲಿ ಸೋಮವಾರ (ಜು.24) ಬೆಳಗ್ಗೆ ನಡೆದಿದೆ.
ಸೋನಾ (19) ಮೃತ ದುರ್ದೈವಿ. ಈಕೆ ಕುಂಬಳೇರಿ ಕ್ರಷರ್ ಬಳಿ ವಾಸವಾಗಿರುವ ಪುಳುಕುಡಿಯಿಲ್ ವರ್ಗೀಸ್ ಮತ್ತು ಶೀಜಾ ದಂಪತಿಯ ಪುತ್ರಿ.
ಮಣ್ಣಿನಲ್ಲಿ ಸಿಲುಕಿ ಸಾವು
ತಂದೆಯ ಜತೆ ಈಜುವಾಗ ಮಣ್ಣಿನಲ್ಲಿ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೇ ಸೋನಾ ಕೊನೆಯುಸಿರೆಳೆದಿದ್ದಾಳೆ. ಇದಕ್ಕೂ ಮುನ್ನ ಸ್ಥಳೀಯರಿಗೆ ಈ ಮಾಹಿತಿ ತಿಳಿದು ಸೋನಾಳನ್ನು ಕಾಪಾಡಲು ಸ್ಥಳಕ್ಕೆ ದೌಡಾಯಿಸಿದರೂ ಸಹ ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ತಂದೆಯಿಂದಲೂ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸಂಜೆ 7ರ ಸಮಯದಲ್ಲಿ ಸೋನಾಳ ಮೃತದೇಹವನ್ನು ಹೊಂಡದಿಂದ ತೆಗೆದು, ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಸೋನಾ, ಸುಲ್ತಾನ್ ಬತೇರಿಯಲ್ಲಿರುವ ಸೆಂಟ್ ಮೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದಳು.
ಪ್ರೀತಿಯಿಂದ ಸಾಕಿ ಸಲುಹಿದ್ದ ಮಗಳ ದುರಂತ ಸಾವು ಕಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸೋನಾಳ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ.