HEALTH TIPS

ಉತ್ತರ ಪ್ರದೇಶ: ಎನ್‌ಡಿಎ ಮೈತ್ರಿಕೂಟ ಸೇರಿದ ಓಂ ಪ್ರಕಾಶ್‌ ರಾಜ್‌ಭರ್‌

             ವದೆಹಲಿ (PTI): ಉತ್ತರ ಪ್ರದೇಶದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಮುಖ ನಾಯಕ, ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಸಂಸ್ಥಾಪಕ ಓಂ ಪ್ರಕಾಶ್‌ ರಾಜ್‌ಭರ್‌ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮರಳುವುದಾಗಿ ಭಾನುವಾರ ಘೋಷಿಸಿದ್ದಾರೆ.

               ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಬಳಿಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

                  ಈ ಬೆಳವಣಿಗೆಯಿಂದ ರಾಜ್ಯದ ಬಿಜೆಪಿಗೆ ಮತ್ತಷ್ಟು ಬಲ ಬರಲಿದೆ ಎಂದು ಅಂದಾಜಿಸಲಾಗಿದೆ.

                 ಓಂ ಪ್ರಕಾಶ್‌ ಮತ್ತು ಅವರ ಮಗ ಅರವಿಂದ್‌ ರಾಜ್‌ಭರ್ ಅವರ ಜೊತೆ ನಡೆಸಿದ ಸಭೆಯ ಚಿತ್ರವನ್ನು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಓಂ ಪ್ರಕಾಶ್‌ ಅವರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದಾರೆ.

                  'ಓಂ ಪ್ರಕಾಶ್‌ ಅವರ ಸೇರ್ಪಡೆಯು ರಾಜ್ಯದಲ್ಲಿ ಎನ್‌ಡಿಎಯನ್ನು ಮತ್ತಷ್ಟು ಬಲಪಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಜ್ಯದ ಬಡವರ ಮತ್ತು ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ದೊರಕಲಿದೆ' ಎಂದು ಹೇಳಿದ್ದಾರೆ.

                  ಈ ಕುರಿತು ಟ್ವೀಟ್‌ ಮಾಡಿರುವ ಓಂ ಪ್ರಕಾಶ್‌ ಅವರು, 'ಬಿಜೆಪಿ ಮತ್ತು ಎಸ್‌ಬಿಎಸ್‌ಪಿ ಒಟ್ಟಾಗಿವೆ. ಸಾಮಾಜಿಕ ನ್ಯಾಯ, ರಾಷ್ಟ್ರೀಯ ಭದ್ರತೆ, ಉತ್ತಮ ಆಡಳಿತ, ತುಳಿತಕ್ಕೊಳಗಾದವರ, ರೈತರ, ದಲಿತರ, ಬಡವರ, ಯುವಕರು ಮತ್ತು ಮಹಿಳೆಯರ ಪರವಾಗಿ ಒಟ್ಟಾಗಿ ಹೋರಾಡುತ್ತೇವೆ' ಎಂದಿದ್ದಾರೆ.

               2024 ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಯಲಿವೆ ಎಂದಿರುವ ಅವರು, ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

                    ಸಂಖ್ಯೆ ದೃಷ್ಟಿಯಲ್ಲಿ ರಾಜ್‌ಭರ್‌ ಸಮುದಾಯವು ಪೂರ್ವ ಉತ್ತರ ಪ್ರದೇಶದ (ಪೂರ್ವಾಂಚಲ) ಪ್ರಮುಖ ಸಮುದಾಯವಾಗಿದ್ದು, ಓಂ ಪ್ರಕಾಶ್‌ ಅವರು ಅಲ್ಲಿಯ ಪ್ರಭಾವಿ ನಾಯಕರಾಗಿದ್ದಾರೆ. ಬಿಜೆಪಿ ಸಖ್ಯದಲ್ಲೇ ಇದ್ದ ಎಸ್‌ಬಿಎಸ್‌ಪಿ, 2022ರ ವಿಧಾನಸಭೆ ಚುನಾವಣೆ ವೇಳೆ ಸಮಾಜವಾದಿ ಪಕ್ಷದ (ಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಯ ಕಾರಣದಿಂದಾಗಿ ಪೂರ್ವಾಂಚಲದಲ್ಲಿ ಉತ್ತಮ ಪ್ರದರ್ಶನ ನೀಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ ಎಂದು ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಿದ ಬಳಿಕ ಎಸ್‌ಪಿ, ಎಸ್‌ಬಿಎಸ್‌ಪಿ ಸಂಬಂಧವೂ ಹಳಸಿತ್ತು.

            80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿರುವ ರಾಜ್ಯವಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಯತ್ನದ ಭಾಗವಾಗಿ ಪಕ್ಷವು ಓಂ ಪ್ರಕಾಶ್‌ ಅವರನ್ನು ತನ್ನತ್ತ ಸೆಳೆದಿದೆ ಎನ್ನಲಾಗಿದೆ.

                ಒಬಿಸಿಯ ಮತ್ತೊಬ್ಬ ಪ್ರಮುಖ ನಾಯಕ ದಾರಾ ಸಿಂಗ್‌ ಚೌಹಾಣ್‌ ಅವರು ಎಸ್‌ಪಿ ಶಾಸಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದು, ಅವರೂ ಬಿಜೆಪಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries