ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಿಂದ ಹೊರಗುಳಿದಿರುವ 1031 ಮಂದಿಯನ್ನು ಮತ್ತೆ ಪಟ್ಟಿಗೆ ಸೇರಿಸಬೇಕೆಂಬ ಆಗ್ರಹದೊಂದಿಗೆ ಕಾಸರಗೋಡು ವ್ಯಾಪಾರ ಭವನದಲ್ಲಿ ಒಗ್ಗಟ್ಟಿನ ಸಮಾವೇಶ ಆಯೋಜಿಸಲಾಯಿತು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಅಹ್ಮದ್ ಶರೀಫ್ ಸಮಾರಂಭ ಉದ್ಘಾಟಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ತುರ್ತು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಹಲವು ಹೋರಾಟಗಳ ಮೂಲಕ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ತಜ್ಞ ವೈದ್ಯರಿಂದ ಪಟ್ಟಿಯನ್ನು ತಯಾರಿಸಲಾಗಿದ್ದರೂ, ಇದರಲ್ಲಿ ಅನ್ಯಾಯವಾಗಿ 1031ಮಂದಿಯನ್ನು ಹೊರಗಿರಿಸಲಾಗಿದೆ. ಕೀಟನಾಶಕ ಕಂಪನಿಗಳ ಹಿತಾಸಕ್ತಿ ಮೇರೆಗೆ ಈ ಹೆಸರು ಕೈಬಿಟ್ಟಿದ್ದರೆ, ಈ ಹೆಸರು ಮರುಸೇರ್ಪಡೆಗೊಳಿಸಲು ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷೆ ಎಂ.ಕೆ.ಅಜಿತಾ ಅಧ್ಯಕ್ಷತೆ ವಹಿಸಿದ್ದರು. ಸುಬೈರ್ ಪಡ್ಪು, ಸಿ.ವಿಜಯಕುಮಾರ್, ಅವ್ವಮ್ಮ, ಕರೀಂ ಚೌಕಿ, ಜೈನ್ ಪಿ.ವರ್ಗೀಸ್, ಹಮೀದ್ ಚೇರಂಗೈ, ಸೀತಿ ಹಾಜಿ, ಆನಂದನ್ ಪೆರುಂಬಳ, ಅಬ್ದುಲ್ ರಹಮಾನ್ ಬಂದ್ಯೋಡ್, ನಾಸರ್ ಪಳ್ಳಂ, ಮುಹಮ್ಮದ್ ಇಚ್ಚಿಲಂಗಲ್, ಸಮೀರ್ ಅಣಂಗೂರ್, ಟಿ. ಇ.ಅನ್ವರ್, ಅಂಬಲತ್ತರ ಕುಞÂಕೃಷ್ಣನ್, ರಹೀಮ್ ನೆಲ್ಲಿಕುನ್ನು, ಉಸ್ಮಾನ್ ಪಳ್ಳಿಕ್ಕಲ್ ಮತ್ತು ರಾಧಾಕೃಷ್ಣನ್ ಅಂಜಾಂವಯಲ್ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕಿ ಪಿ.ಶೈನಿ ಸ್ವಾಗತಿಸಿದರು. ಪ್ರಮೀಳಾ ಚಂದ್ರನ್ ವಂದಿಸಿದರು.