ತ್ರಿಸ್ಸೂರು: ಮಾವೋವಾದಿಗಳ ಸಹಕಾರದಿಂದ ಒಡಿಶಾದಲ್ಲಿ ಎಕರೆಗಟ್ಟಲೆ ಜಮೀನಿನಲ್ಲಿ ಗಾಂಜಾ ಬೆಳೆದು ಕೇರಳ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದ ಗಾಂಜಾ ರಾಣಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ನಮಿತಾ ಪ್ರೀಚಾ (32) ಎಂದು ಗುರುತಿಸಲಾಗಿದೆ.
ಚಿಯ್ಯಾರಂನಿಂದ 221 ಕೆಜಿ ಗಾಂಜಾ ವಶಪಡಿಸಿಕೊಂಡ ಪ್ರಕರಣದ ತನಿಖೆಯ ವೇಳೆ ಗಾಂಜಾ ರಾಣಿಯನ್ನು ಬಂಧಿಸಲಾಗಿದೆ. ಪೊಲೀಸರು ಮಾರುವೇಷದಲ್ಲಿ ಹೋಗಿ 10 ದಿನ ಒಡಿಶಾದಲ್ಲಿ ಉಳಿದುಕೊಂಡು, ಆರೋಪಿಗಳ ಮೇಲೆ ನಿಗಾ ಇರಿಸಿದ್ದರು. ತನಿಖೆಯ ವೇಳೆ ಅರಣ್ಯದಿಂದ ಆವೃತವಾಗಿರುವ ಅಡಬಾ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿರುವುದು ಪೊಲೀಸರಿಗೆ ಪತ್ತೆಯಾಗಿತ್ತು. ಆರೋಪಿಗಳನ್ನು ಈ ಮೊದಲೇ ಒಡಿಶಾ ಪೊಲೀಸರು ಬಂಧಿಸಿದ್ದರು. ಆದರೆ ಆರೋಪಿಗಳ ಶಸ್ತ್ರಸಜ್ಜಿತ ಅನುಯಾಯಿಗಳು ಠಾಣೆಯ ಮೇಲೆ ದಾಳಿ ಮಾಡಿ ಬಿಡುಗಡೆ ಮಾಡಿಕೊಂಡು ಹೋಗಿದ್ದರು. ಆದ್ದರಿಂದ, ಒಡಿಶಾ ಕೇಡರ್‌ನ ಮಲಯಾಳಿ ಐಪಿಎಸ್ ಅಧಿಕಾರಿ ಸ್ವಾತಿ ಎಸ್. ಕುಮಾರ್ ಅವರ ಸಹಾಯ ಪಡೆದು ಎರಡು ಠಾಣೆಗಳ ಸಂಪೂರ್ಣ ಪಡೆಗಳ ಮೇಲ್ವಿಚಾರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ತಕ್ಷಣ ಆರೋಪಿಗಳನ್ನು ಕೇರಳಕ್ಕೆ ಕರೆತರಲಾಗಿದೆ.
ಮೇ 5ರಂದು ನೆಡುಪುಳ ಪೊಲೀಸರು ಮತ್ತು ತ್ರಿಶೂರ್ ನಗರ ಮಾದಕ ದ್ರವ್ಯ ನಿಗ್ರಹ ವಿಭಾಗವು, ಕಾರೊಂದರಲ್ಲಿ 221 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ನಾಲ್ವರನ್ನು ಬಂಧಿಸಲಾಗಿತ್ತು ಗಾಂಜಾ ರಾಣಿ ಮತ್ತು ಆಕೆಯ ತಂಡ ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದೆ ಎಂಬ ಸಂಗತಿ ವಿಚಾರಣೆ ವೇಳೆ ಪೊಲೀಸರಿ ತಿಳಿಯಿತು. ಕಳೆದ ತಿಂಗಳು 14ರಂದು ನಮಿತಾಳ ಪತಿ ಮತ್ತು ಮಧ್ಯವರ್ತಿ ಆಗಿರುವ ಎರ್ನಾಕುಲಂನ ನೆಲ್ಲಿಮಟ್ಟಂ ಮೂಲದ ಸಾಜನ್, ಗಾಂಜಾ ಮಾರಾಟದ ಹಣ ಸಂಗ್ರಹಿಸಲು ಕೇರಳಕ್ಕೆ ಬರುತ್ತಿದ್ದಾಗ ಪಾಲಕ್ಕಾಡ್‌ನಲ್ಲಿ ಬಂಧಿಸಲಾಯಿತು. 20 ವರ್ಷಗಳಿಂದ ಒಡಿಶಾದಲ್ಲಿದ್ದ ಸಾಜನ್ ಕೇರಳಕ್ಕೆ ಬಂದಿದ್ದು ಅಪರೂಪ.
ಗಾಂಜಾ ಬೆಳೆಯಲು ದೊಡ್ಡ ಮಾವೋವಾದಿ ಗ್ಯಾಂಗ್ ಸಹಾಯ ಮಾಡುತ್ತಿತ್ತು. ಕೇಂದ್ರ ಪಡೆಗಳ ಪ್ರಬಲ ಪ್ರತಿರೋಧದಿಂದ ಮಾವೋವಾದಿಗಳ ಸಂಖ್ಯೆ ಕಡಿಮೆಯಾದರೂ, ಕಾಡುಗಳಿಂದ ಸುತ್ತುವರಿದ ಹಳ್ಳಿಗಳಲ್ಲಿ ಈಗಲೂ ಗಾಂಜಾ ವ್ಯಾಪಕವಾಗಿದೆ. ಬ್ರಹ್ಮಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರಾಟ ಮಾಡುವಾಗ ಅರುಣ್ ನಾಯಕ್ ಮೊದಲ ಬಾರಿಗೆ ಬಂಧಿತನಾಗಿದ್ದ. ಆತನ ಸಹಾಯದಿಂದ ನಮಿತಾ ಚುಡಂಗ್‌ಪುರ ಗ್ರಾಮದಲ್ಲಿ ಪತ್ತೆಯಾಗಳು. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಂಕಿತ್ ಅಶೋಕನ್ ಅವರ ಸೂಚನೆ ಮೇರೆಗೆ ನೆಡುಪುಳ ಠಾಣೆಯ ಇನ್ಸ್ಪೆಕ್ಟರ್ ಟಿ.ಜಿ.ದಿಲೀಪ್ ನೇತೃತ್ವದಲ್ಲಿ ತನಿಖೆ ನಡೆದಿದೆ.