ಕೆಲವು ಕಡೆ ಮಳೆಯ ಅಭಾವ, ಇನ್ನು ಕೆಲವು ಕಡೆ ವಿಪರೀತ ಮಳೆ, ಇನ್ನು ಕೆಲವು ಕಡೆ ಪ್ರವಾಹದ ರುದ್ರ ನರ್ತನ ಒಟ್ಟಾರೆ ಈ ವರ್ಷ ಮಳೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದೆ.
ಮಳೆಗಾಲದಲ್ಲಿ ಆರೋಗ್ಯ ವೃದ್ಧಿಸಲು ಕೆಲವೊಂದು ಆಹಾರಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು, ಅದರಲ್ಲೊಂದು ಕೆಸುವಿನ ಎಲೆ. ಮಳೆಗಾಲದಲ್ಲಿ ದೇಹದ ಉಷ್ಣಾಂಶ ಕಾಪಾಡುವಲ್ಲಿ ಕೆಸುವಿನ ಎಲೆ ತುಂಬಾ ಸಹಕಾರಿ. ಕೆಸುವಿನ ಎಲೆ ಹಾಗೂ ದಂಟು ಹಾಕಿ ಗೊಜ್ಜು, ಕೆಸುವಿನ ಎಲೆಯಿಂದ ಪತ್ರೊಡೆ ಮುಂತಾದ ಅಡುಗೆ ಮಾಡಿ ಸವಿಯಬೇಕು.ಮಳೆಗಾಲದಲ್ಲಿ ಕೆಸುವಿನ ಎಲೆ ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ ನೋಡಿ:
- ಕೆಸುವಿನ ದಂಟಿನಲ್ಲಿ ಕ್ಯಾಲ್ಸಿಯಂ, ನಾರಿನಂಶ, ರಂಜಕ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳಿವೆ, ಆದ್ದರಿಂದ ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.
- ಅಲ್ಲದೆ ಮಳೆಗಾಲದಲ್ಲಿ ಹಸಿವನ್ನು ನಿಯಂತ್ರಿಸಲು ಈ ಕೆಸುವಿನ ಎಲೆ ಸಹಕಾರಿಯಾಗಿದೆ. ಹಸಿವು ನಿಯಂತ್ರಿಸುವುದರಿಂದ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ.
- ದೇಹವನ್ನು ಶುದ್ಧ ಮಾಡುತ್ತದೆ: ಅಂದರೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ನಮ್ಮ ದೇಹವನ್ನು ಇದು ಡಿಟಾಕ್ಸ್ ಮಾಡುವುದರಿಂದ ರಕ್ತವನ್ನು ಶುದ್ಧೀಕರಿಸುತ್ತದೆ ಅಲ್ಲದೆ ಅನೇಕ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
- ಸಂಧಿವಾತದ ಸಮಸ್ಯೆ ತಡೆಗಟ್ಟುತ್ತದೆ: ಮಳೆಗಾಲದಲ್ಲಿ ತಂಪು ಹೆಚ್ಚಾಗಿರುವುದರಿಂದ ಸಂಧಿವಾತದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಸುವಿನ ಎಲೆಯಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಲು ಸಹಕಾರಿ. ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ.
- ರಕ್ತಸಂಚಾರ ಉತ್ತಮವಾಗಿಸುತ್ತದೆ: ಚಳಿ ಹೆಚ್ಚಾದಾಗ ರಕ್ತ ಹೆಪ್ಪುಗಟ್ಟಿ ನೋವುಂಟಾಗುವುದು. ಕೆಸುವಿನ ಎಲೆ ಸೇವಿಸಿದಾಗ ಚಳಿಯಲ್ಲಿ ಮೈ ಉಷ್ಣಾಂಶ ಹೆಚ್ಚಾಗುವುದು, ಇದರಿಂದ ರಕ್ತ ಸಂಚಾರ ಉತ್ತಮವಾಗಿ ನಡೆಯುವುದು.
- ತ್ವಚೆಗೂ ಒಳ್ಳೆಯದು: ಕೆಸುವಿನ ಎಲೆ ಸೇವನೆಯಿಂದ ತ್ವಚೆಗೂ ತುಂಬಾ ಒಳ್ಳೆಯದು.
ಮಳೆಗಾಲದಲ್ಲಿ ಪತ್ರೊಡೆ ಎಂದರೆ ಎಲ್ಲರ ಹಾಟ್ ಫೇವರೆಟ್
ಮಳೆಗಾಲದಲ್ಲಿ ಪತ್ರೊಡೆ ತಿನ್ನುವುದರಲ್ಲಿ ಸಿಗುವ ಖುಷಿ ಇದೆಯಲ್ಲಾ, ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅಯುಷ್ ಇಲಾಖೆ ಕೂಡ ಪತ್ರೊಡೆಯನ್ನು ಔಷಧೀಯ ಆಹಾರವೆಂದು ಹೇಳಿದೆ.
ಪತ್ರೊಡೆ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದ, ಪತ್ರೊಡೆ ತಿನ್ನುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು. ಕೆಸುವಿನ ಎಲೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ಗುಣಗಳ ಜೊತೆಗೆ ಬಾಯಿಗೂ ತುಂಬಾನೇ ರುಚಿಯಾಗಿರುವುದರಿಂದ ಪತ್ರೊಡೆ ನಮ್ಮೆಲ್ಲರ ಅಚ್ಚುಮೆಚ್ಚು ಆಗಿದೆ ಅಲ್ವಾ?