ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಹವ್ಯಕ ಸಭೆ ಭಾನುವಾರ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಂಧ್ಯಾಕುಮಾರಿ ಮರುವಳ ದೀಪ ಬೆಳಗಿಸಿದರು. ಮಂಗಳೂರು ಪ್ರಾಂತ ಉಪಾಧ್ಯಕ್ಷರು ಹಾಗೂ ಮುಳ್ಳೇರಿಯ ಮಂಡಲ ಅಧ್ಯಕ್ಷರೂ ಆಗಿರುವ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಧ್ವಜಾರೋಹಣ ನಡೆಸಿದರು. ಶಂಖನಾದ ಗುರುವಂದನೆ , ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದ್ದರು.
ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಪ್ರಾಸ್ತಾವಿಕವಾಗಿ ಮಾತನಾಡಿ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಸಂಘಟನಾ ಚಾತುರ್ಮಾಸ್ಯದ ಮಾಹಿತಿಗಳನ್ನು ನೀಡಿ ಈ ದಿನ ಪುರಸ್ಕøತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಗುರುಗಳಿಂದ ಅನುಗ್ರಹ ಪುರಸ್ಕಾರ ಸ್ವೀಕರಿಸುವ ಸದವಕಾಶ ಲಭ್ಯವಿದೆ ಎಂದರು. ವಲಯ ಭಿಕ್ಷೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರಿಗೆ ಶ್ರೀಗುರುಗಳಿಂದ ಪುರಸ್ಕøತರಾಗುವ ಅವಕಾಶವಿದೆ ಎಂದ ಅವರು ವಲಯದ ಸಾಧಕರನ್ನು ಗುರುತಿಸಲು ಸಹಕಾರ ಕೋರಿದರು.
ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿ ವಿಭಾಗವಾರು ವರದಿಗಳನ್ನು ನೀಡಲಾಯಿತು.
ಆಗಸ್ಟ್ 28 ರಂದು ಗುಂಪೆ ವಲಯದ ಭಿಕ್ಷಾಸೇವೆ ನೆರವೇರಲಿದೆ ಎಂದು ತಿಳಿಸಿ ವಲಯದ ಶಿಷ್ಯಬಂಧುಗಳ ಮನೆಗಳಿಗೆ ವಿತರಿಸಲಿರುವ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆ ಹಾಗೂ ವ್ಯಾಸ ಮಂತ್ರಾಕ್ಷತೆಯನ್ನು ವಲಯದ ಎಲ್ಲಾ ಘಟಕಗಳ ಗುರಿಕ್ಕಾರರಿಗೆ ನೀಡಲಾಯಿತು. ಕೋಶಾಧ್ಯಕ್ಷ ರಾಜಗೋಪಾಲ ಭಟ್ ಅಮ್ಮಂಕಲ್ಲು ಲೆಕ್ಕಪತ್ರ ಮಂಡಿಸಿದರು. ಗುಂಪೆ ವಲಯದಲ್ಲಿ 2022-23 ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅರುಣಾ ಮರುವಳ, . ಆದೀಶಕೃಷ್ಣ ಅಮ್ಮಂಕಲ್ಲು, ಸ್ಪೂರ್ತಿಲಕ್ಷ್ಮಿ ಗುಂಪೆ, ಸಿಂಚನಾ ಜಿ.ಯಂ, ಗುಂಪೆ, . ಹಿರಣ್ಮಯಿ ಮರುವಳ, ಚಿನ್ಮಯೀ ಬೆಜಪ್ಪೆ, . ಪ್ರಬೋಧ ಬಾಯಾಡಿ, ಮನೋಜ್ಞ ಚೆಕ್ಕೆಮನೆ, ಅಕ್ಷಿತ್ ರಾಮ ನೆಕ್ಕಿಗುಳಿ ಇವರನ್ನು ಶಾಲುಹೊದೆಸಿ ಫಲಕ,ಹಣ್ಣುಹಂಪಲುಗಳನ್ನಿತ್ತು ಗೌರವಿಸಲಾಯಿತು.
ವಿದ್ಯಾರ್ಥಿವಾಹಿನಿ ಪ್ರಧಾನೆ ನಳಿನಿ ಬೆಜಪ್ಪೆ ವಿದ್ಯಾರ್ಥಿಗಳ ಕಿರುಪರಿಚಯ ನೀಡಿದರು. ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ನೇರೋಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿದರು.
ವಲಯದ ಗುರಿಕ್ಕಾರರು, ಪದಾಧಿಕಾರಿಗಳು, ಕಾರ್ಯಕರ್ತರು , ಶಿಷ್ಯಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಾಮತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.