ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ವಿದ್ಯುತ್ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಇದರಲ್ಲಿ ಓರ್ವ ಮೃತಪಟ್ಟಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನಾಕಾರರ ಕಲ್ಲು ತೂರಾಟದಲ್ಲಿ 12ಕ್ಕೂ ಹೆಚ್ಚು ಪೊಲೀಸರು ಮತ್ತು ವಿದ್ಯುತ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯಲ್ಲಿ ಗ್ರಾಮಸ್ಥರೊಬ್ಬರು ಸಾವನ್ನಪ್ಪಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆತನ ಹೆಸರು ಬಾಸಲ್ ಗ್ರಾಮದ ನಿವಾಸಿ ಖುರ್ಷಿದ್ ಆಲಂ (34) ಎಂದು ಹೇಳಲಾಗಿದೆ. ಮತ್ತೊಂದೆಡೆ, ಬರ್ಸೋಯ ಚಾಪಖೋಡ್ ಪಂಚಾಯತ್ ನಿವಾಸಿ ನಿಯಾಜ್ ಆಲಂ (32) ಸ್ಥಿತಿ ಗಂಭೀರವಾಗಿದೆ. ಆದರೆ ಪೊಲೀಸರ ಗೋಲಿಬಾರ್‌ನಲ್ಲಿ 5 ಜನರು ಗುಂಡು ಹಾರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬರ್ಸೋಯಿ ಉಪವಿಭಾಗದಲ್ಲಿ ಬುಧವಾರ ಮಧ್ಯಾಹ್ನ 12:30ಕ್ಕೆ ಒಂದು ಸಾವಿರಕ್ಕೂ ಹೆಚ್ಚು ಜನರು ವಿದ್ಯುತ್ ಕಡಿತದ ವಿರುದ್ಧ ರಸ್ತೆಗಿಳಿದರು. ಪ್ರತಿಭಟನಾಕಾರರು ವಿದ್ಯುತ್ ಕಚೇರಿಗೆ ಘೇರಾವ್ ಹಾಕಿದರು. ಬಸ್ಟೋಲ್ ಚೌಕ್‌ನ ಮುಖ್ಯರಸ್ತೆ ಮತ್ತು ಪ್ರಾಣ್‌ಪುರದ ಬರ್ಸೋಯ್ ಬ್ಲಾಕ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಜನರು ಜಾಮ್ ಮಾಡುವ ಮೂಲಕ ಪ್ರತಿಭಟನೆಯನ್ನು ಪ್ರಾರಂಭಿಸಿದರು.
ಈ ವೇಳೆ ಪೊಲೀಸರು ಗುಂಪನ್ನು ನಿಯಂತ್ರಿಸಲು ಮುಂದಾದಾಗ ಆಕ್ರೋಶಗೊಂಡ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿದರು. ಉದ್ರಿಕ್ತಗೊಂಡ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಗುಂಡು ಹಾರಿಸಿದರು.
ಬುಧವಾರ ಬೆಳಗ್ಗೆ 5ರಿಂದ 11ರವರೆಗೆ ನಿರ್ವಹಣಾ ಕಾಮಗಾರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಜನರು ಸಿಟ್ಟಿಗೆದ್ದರು.
ಕತಿಹಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದ ನಂತರ ರಾಜ್ಯದಲ್ಲಿ ರಾಜಕೀಯ ಚರ್ಚೆ ಕಾವೇರಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಪ್ರತಿಪಕ್ಷ ನಾಯಕ ವಿಜಯ್ ಸಿನ್ಹಾ ಸ್ಥಳಕ್ಕೆ ತೆರಳಿದರು.