ಅಗರ್ತಲಾ: ಇಲ್ಲಿಯ ಶಕ್ತಿಪೀಠ ಎನಿಸಿಕೊಂಡಿರುವ ತ್ರಿಪುರೇಶ್ವರಿ ದೇವಾಲಯದ ಕಲ್ಯಾಣಿಯಲ್ಲಿ ಮಾನವ ತಲೆಬುರುಡೆ ಪತ್ತೆಯಾಗಿದೆ.
500 ವರ್ಷಗಳಷ್ಟು ಹಳೆಯದಾದ ದೇಗುಲದ ಆವರಣದ ಕಲ್ಯಾಣಿಯೊಳಗೆ ಮಾನವನ ತಲೆಬುರುಡೆ ಬಂದಿದ್ದಾದರೂ ಹೇಗೆ ಎನ್ನುವುದನ್ನು ಪತ್ತೆ ಮಾಡಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡಸಲಾಗುತ್ತಿದೆ.
ತಲೆಬುರುಡೆಯನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ನೀಡಿದ್ದಾರೆ. ಕಲ್ಯಾಣಿಯಲ್ಲಿ ಮತ್ಯಾವುದೆ ಮಾನವ ದೇಹದ ಭಾಗಗಳು ದೊರೆತಿಲ್ಲ ಎಂದು ತ್ರಿಪುರಾ ಸ್ಟೇಟ್ ರೈಫಲ್ಸ್‌ನ ಡೈವರ್ಸ್ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸಹಾ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಮುಂದಿನ 45 ದಿನಗಳವರೆಗೆ ಕಲ್ಯಾಣಿಯ ನೀರನ್ನು ಬಳಸುವಂತಿಲ್ಲ, ಪೂಜೆ ನಡೆಸಿ ನೀರನ್ನು ಶುದ್ಧಗೊಳಿಸಿದ ಬಳಿಕ ನೀರನ್ನು ಬಳಕೆ ಮಾಡಬಹುದು ಎಂದು ದೇವಾಲಯದ ವ್ಯವಸ್ಥಾಪಕ ಮಾನಿಕ್ ದತ್ತ ತಿಳಿಸಿದ್ದಾರೆ.
ಈ ದೇವಾಲಯವನ್ನು 1501ರಲ್ಲಿ ಮಹಾರಾಜ ಧನ್ಯ ಮಾಣಿಕ್ಯ ಅವರು ನಿರ್ಮಿಸಿದ್ದರು. ಪ್ರಸ್ತುತ ರಾಜ್ಯ ಸರ್ಕಾರ ದೇವಾಲಯವನ್ನು ಮುನ್ನಡೆಸುತ್ತಿದೆ.