ಟೊರಂಟೊ: ಕೆನಡಾದ ಹಿರಿಯ ಪೊಲೀಸ್ ಅಧಿಕಾರಿ ಬಲ್ತೇಜ್ ಸಿಂಗ್ ಧಿಲೋನ್ರನ್ನು 'ವರ್ಕ್ಸ್ಪೇಸ್ ಬಿ.ಸಿ ಆಡಳಿತ ಮಂಡಳಿ'ಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು ಇದರೊಂದಿಗೆ ಈ ಉನ್ನತ ಹುದ್ದೆಗೇರಿದ ಪ್ರಥಮ ಏಶ್ಯನ್ ಹಾಗೂ ಪ್ರಥಮ ಟರ್ಬನ್(ಪೇಟ)ಧಾರಿ ಸಿಖ್ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕೆನಡಾದಲ್ಲಿ ಪೊಲೀಸ್ ಅಧಿಕಾರಿಯಾಗಿ 3 ದಶಕಗಳಿಗೂ ಅಧಿಕ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಧಿಲೋನ್, 1985ರ ಕನಿಷ್ಕ ಏರಿಂಡಿಯಾ ವಿಮಾನದ ಮೇಲೆ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ತಂಡದ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತದಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಸ್ಥಳಗಳನ್ನು ಉತ್ತೇಜಿಸುವ ಪ್ರಾಂತೀಯ ಏಜೆನ್ಸಿ 'ವರ್ಕ್ಸ್ಪೇಸ್ ಬಿ.ಸಿ'ಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಧಿಲೋನ್ ಜೂನ್ 30ರಿಂದ ಮುಂದಿನ 3 ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ ಎಂದು ಬ್ರಿಟಿಷ್ ಕೊಲಂಬಿಯಾ ಸರಕಾರ ಘೋಷಿಸಿದೆ.
ಸಮುದಾಯ ಸೇವೆಗಾಗಿ ರಾಣಿ ಎಲಿಜಬೆತ್ ಗೋಲ್ಡನ್ ಮತ್ತು ಡೈಮಂಡ್ ಜುಬಿಲಿ ಪದಕ ಪಡೆದಿರುವ ಧಿಲೋನ್ 'ತನ್ನ ಪೊಲೀಸ್ ಸಮವಸ್ತ್ರದ ಜತೆ ಟರ್ಬನ್ ಧರಿಸಿದ ಕೆನಡಾ ಪೊಲೀಸ್ ಇಲಾಖೆಯ ಪ್ರಥಮ ಸದಸ್ಯನಾಗಿ' ಇತಿಹಾಸ ಬರೆದಿದ್ದಾರೆ ಎಂದು ಸರಕಾರ ಹೇಳಿದೆ.