ಪುಣೆ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಣಿತಶಾಸ್ತ್ರಜ್ಞೆ ಮತ್ತು ವಿಜ್ಞಾನಿ, ಡಾ.ಜಯಂತ್ ನಾರ್ಲಿಕರ್ ಅವರ ಪತ್ನಿ ಡಾ.ಮಂಗಳಾ ನಾರ್ಲಿಕರ್ ಸೋಮವಾರ ಮಹಾರಾಷ್ಟ್ರದ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮಂಗಳಾ ನಾರ್ಲಿಕರ್ ಅವರು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದಲೂ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರು ಪತಿ, ಮೂವರು ಪುತ್ರಿಯರು ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ತನ್ನ ಪತಿಯೊಂದಿಗೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಿಂದ ಭಾರತಕ್ಕೆ ಮರಳಿದ ನಂತರ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಡಾ. ಮಂಗಳಾ ನಾರ್ಲಿಕರ್ ಬಾಂಬೆ ವಿಶ್ವವಿದ್ಯಾಲಯದಲ್ಲಿ ಗಣಿತವನ್ನು ಸಹ ಬೋಧಿಸಿದ್ದರು.
1989 ರಲ್ಲಿ ದಂಪತಿ ಪುಣೆಗೆ ತೆರಳಿದ್ದರು. ಅಲ್ಲಿ ಡಾ. ಮಂಗಳಾ ನಾರ್ಲಿಕರ್ ಅವರು ಪುಣೆ ವಿಶ್ವವಿದ್ಯಾಲಯದ (ಈಗ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ) ಗಣಿತ ವಿಭಾಗದಲ್ಲಿ ಕೆಲಸ ಮಾಡಿದರು. ಆಕೆಯ ಪಾರ್ಥೀವ ಶರೀರವನ್ನು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು, ನಂತರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.