ನವದೆಹಲಿ: ಮಣಿಪುರ ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿದ ಅಧ್ಯಕ್ಷರ ನಡೆಯನ್ನು ಖಂಡಿಸಿ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯ ಮೂವರು ಸದಸ್ಯರು ಗುರುವಾರ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕಾರಾಗೃಹಗಳ ಸುಧಾರಣೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು.
ಟಿಎಂಸಿಯ ಡೆರೆಕ್ ಒಬ್ರಿಯಾನ್, ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಮತ್ತು ಪ್ರದೀಪ್ ಭಟ್ಟಾಚಾರ್ಯ ಅವರು ಜಂಟಿಯಾಗಿ ನೀಡಿದ ಈ ಮನವಿಗೆ ಸಮಿತಿಯ ಅಧ್ಯಕ್ಷ ಬ್ರಿಜ್‌ಲಾಲ್ ಅವರಿಂದ ಸ್ಪಂದನೆ ಸಿಗಲಿಲ್ಲ.
ಕಾರಾಗೃಹ ಸುಧಾರಣೆ ಕುರಿತು ಚರ್ಚಿಸಲು ಈಗಾಗಲೇ ಜುಲೈ ತಿಂಗಳಲ್ಲಿ ಮೂರು ಸಭೆಗಳು ನಿಗದಿಯಾಗಿವೆ. ಹೀಗಾಗಿ, ತುರ್ತು ಆದ್ಯತೆ ಮೇರೆಗೆ ಮಣಿಪುರ ಕುರಿತು ಚರ್ಚಿಸಲಾಗದು ಎಂದು ಅಧ್ಯಕ್ಷರು ಈ ಹಿಂದೆಯೇ ಡೆರೆಕ್ ಒಬ್ರಿಯಾನ್ ಮತ್ತು ಸಿಂಗ್ ಅವರಿಗೆ ತಿಳಿಸಿದ್ದರು.
ಅಂತಿಮವಾಗಿ, ಮಣಿಪುರ ಪರಿಸ್ಥಿತಿ ಬಗ್ಗೆ ಚರ್ಚಿಸುವ ಹೊಣೆಯಿಂದ ನುಣುಚಿಕೊಳ್ಳುವ ನಡೆಯನ್ನು ಖಂಡಿಸಿ ಸಭೆಯಿಂದ ಹೊರನಡೆಯುತ್ತಿದ್ದೇವೆ ಎಂದು ಹೇಳಿದ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಸಭೆಯಲ್ಲಿ ಅಧ್ಯಕ್ಷರನ್ನು ಒಳಗೊಂಡು ಏಳು ಸದಸ್ಯರು ಭಾಗವಹಿಸಿದ್ದರು.
'ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಸಮಿತಿಯ ಸದಸ್ಯರಾಗಿ ಮಣಿಪುರದ ಸ್ಥಿತಿಯನ್ನು ತುರ್ತಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚೆ ನಡೆಸುವುದು ಸದಸ್ಯರ ನೈತಿಕ ಮತ್ತು ಸಾಂವಿಧಾನಿಕ ಹೊಣೆಯಾಗಿದೆ' ಎಂದು ಇವರು ಪ್ರತಿಪಾದಿಸಿದ್ದರು.
'ನೀವು ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದವರು. ಮಣಿಪುರದಲ್ಲಿನ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿರುತ್ತದೆ. ಆ ರಾಜ್ಯಕ್ಕೆ ಸದ್ಯ ಪರಿಹಾರದ ಅಗತ್ಯವಿದೆ. ಅಲ್ಲಿ ಹಿಂಸೆ ಕೊನೆಗಾಣಿಸಬೇಕಾಗಿದೆ. ಚುನಾಯಿತ ಪ್ರತಿನಿಧಿಗಳಾಗಿ ಇದನ್ನು ಅಲಕ್ಷಿಸಲಾಗದು' ಎಂದೂ ಹೇಳಿದರು.
'ಕೆಲವು ಸದಸ್ಯರು ಕಳೆದ ತಿಂಗಳು ಕೂಡಾ ಚರ್ಚೆ ಕೋರಿ ಪತ್ರ ಬರೆದಿದ್ದವು. ಅದರೆ, ಅದನ್ನು ಸ್ವೀಕರಿಸಿಲ್ಲ' ಎಂದು ಹೇಳಿದರು. ಇದೇ ತಿಂಗಳು ಸಮಿತಿಯ ಇನ್ನೂ ಎರಡು ಸಭೆ ನಿಗದಿಯಾಗಿದೆ. ಆ ಸಭೆಗಳಿಗೂ ಈ ಮೂವರು ಸದಸ್ಯರು ಗೈರುಹಾಜರಾಗುವ ಸಾಧ್ಯತೆಗಳಿವೆ.