ಅಮರಾವತಿ: ಮಹಾತ್ಮ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಬಲಪಂಥೀಯ ನಾಯಕ ಸಂಭಾಜಿ ಭಿಡೆ ವಿರುದ್ಧ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರಾಜಪೇಟ್‌ನ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಮರಾವತಿ: ಮಹಾತ್ಮ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಬಲಪಂಥೀಯ ನಾಯಕ ಸಂಭಾಜಿ ಭಿಡೆ ವಿರುದ್ಧ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರಾಜಪೇಟ್‌ನ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ಸಂಭಾಜಿ ಅವರು ಗುರುವಾರ ಅಮರಾವತಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿದರ್ಭ ಪ್ರವಾಸದಲ್ಲಿರುವ ಸಂಭಾಜಿ ಅವರು ಅಮರಾವತಿಯ ಬದ್ನೇರಾ ರಸ್ತೆ ಪ್ರದೇಶದಲ್ಲಿರುವ ಭಾರತ್ ಮಂಗಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದರು ಎಂದೂ ಆರೋಪಿಸಲಾಗಿದೆ.
ಸಂಭಾಜಿ ವಿರುದ್ಧ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ನಂದಕಿಶೋರ್ ಕುಯಟೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಸಂಭಾಜಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಸಾಹೇಬ್ ಥೋರಟ್ ಅವರು ವಿಧಾನಸಭೆಯಲ್ಲಿ ಆಗ್ರಹಿಸಿದ್ದರು.
'ಸಂಭಾಜಿ ಅವರು ಪದೇ ಪದೇ ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ನೀಡುವ ಹೇಳಿಕೆಗಳನ್ನು ರಾಜಕೀಯ ಹಿತಾಸಕ್ತಿಯಿಂದ ಬೆಂಬಲಿಸುವವರು ಯಾರು ಎಂಬುದನ್ನು ಪತ್ತೆಹಚ್ಚಬೇಕಿದೆ' ಎಂದೂ ಹೇಳಿದ್ದರು.