ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಿಂದ ಕಳವು ಪ್ರಕರಣ ಮುಂದುವರಿದಿದ್ದು, ಮಾವಿನಕಟ್ಟೆಯಲ್ಲಿ ಬೀಗಜಡಿದ ಮನೆಗೆ ನುಗ್ಗಿದ ಕಳ್ಳರು ಒಂದುವರೆ ಲಕ್ಷ ರೂ. ನಗದು ಕಳವುಗೈದಿದ್ದಾರೆ.
ಮಾವಿನಕಟ್ಟೆಯ ವಾಯವಳಪ್ಪು ನಿವಾಸಿ ಸೀದಿ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಸೀದಿ ಕುಟುಂಬ ಜೂ. 22ರಂದು ಮನೆಗೆ ಬೀಗಹಾಕಿ ಮುಂಬೈ ತೆರಳಿದ್ದು, ಈ ಸಂದರ್ಭ ನೆರೆಮನೆ ನಿವಾಸಿಯೊಬ್ಬರಲ್ಲಿ ಮನೆಯತ್ತ ಗಮನಹರಿಸುವಂತೆ ತಿಳಿಸಿದ್ದರು. ಈ ಮಧ್ಯೆ ಮಂಗಳವಾರ ಮಧ್ಯಾಹ್ನ ಮನೆ ಬಾಗಿಲು ತೆರೆದುಕೊಂಡ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಈ ವ್ಯಕ್ತಿ ಸೀದಿ ಅವರ ಅಡ್ಕತ್ತಬೈಲಿನಲ್ಲಿರುವ ಅಳಿಯನ ಗಮನಕ್ಕೆ ತಂದಿದ್ದರು. ತಕ್ಷಣ ಕುಂಬಳೆ ಠಾಣೆ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಬೆರಳಚ್ಚು, ಶ್ವಾನದಳ ಸಿಬ್ಬಂದಿಯೊಂದಿಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಸೋಮವಾರ ರಾತ್ರಿ ಹಾಗೂ ಮಂಗಳವಾರ ನಸುಕಿನ ಮಧ್ಯೆ ಕಳವು ನಡೆದಿರಬೇಕೆಂದು ಸಂಶಯಸಲಾಗಿದೆ. ಮನೆ ಸನಿಹದ ಶೆಡ್ಡಿನ ಬಾಗಿಲು ಒಡೆದು, ಅಲ್ಲಿಂದ ಗುದ್ದಲಿಯೊಂದನ್ನು ತೆಗೆದು ಮನೆ ಬಾಗಿಲ ಬೀಗ ಒಡೆಯಲಾಗಿದೆ. ಒಂದು ಕಪಾಟನ್ನು ಜಲಾಡಿ, ಅದರೊಳಗಿದ್ದ ಒಂದುವರೆ ಲಕ್ಷ ರೂ. ನಗದು ದೋಚಿದ್ದರೆ, ಇನ್ನೊಂದು ಕಪಾಟನ್ನು ಒಡೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಮನೆಯಿಂದ ಎರಡು ಬೆರಳಚ್ಚು ಸಂಗ್ರಹಿಸಲಾಗಿದೆ. ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸುತ್ತಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳ ಕಾಲಾವಧಿಯಲ್ಲಿ 15ರಷ್ಟು ಕಳವು ಕೃತ್ಯ ನಡೆದಿದ್ದು, ಯಾವುದೇ ಆರೋಪಿಗಳ ಬಂಧನ ಇದುವರೆಗೆ ಸಾಧ್ಯವಾಗದರುವುದು ಪೊಲೀಸ್ ಇಲಾಖೆ ಬಗ್ಗೆ ಜನತೆ ಸಂಶಯದಿಂದ ನೋಡುವಂತಾಗಿದೆ.