ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಮಂಗಳವಾರ ಕಾಸರಗೊಡು, ಕಣ್ಣೂರು ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ದೇಶ ಮೇರೆಗೆ ಕಾಲೇಜು ಹೊರತುಪಡಿಸಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೊಷಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗರಿ ನಡೆಯುತ್ತಿರುವ ಹಲವೆಡೆ ಭಾರಿ ಮಳೆಯಿಂದಾಗಿ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತುರ್ತು ಸಂದರ್ಶನ ನಡೆಸಿ, ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸಂಚಾರ ಗಣನೀಯವಗಿ ಹೊರತುಪಡಿಸಲು ಹಾಗೂ ಮಲೆನಾಡು ಪ್ರದೇಶಗಳಲ್ಲಿ ರಾತ್ರಿ ಕಾಲ ವಾಹನ ಸಂಚಾರ ನಿಯಂತ್ರಿಸುವಂತೆಯೂ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ವಿವಿಧ ದಿವಸಗಳಲ್ಲಿ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತಕ್ಕೆ ಒಳಗಾಗುತ್ತಿರುವ ಮಲೆನಾಡು ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ತುರ್ತುಸೇವೆ ಹೊರತಾಗಿ ಇತರ ಪ್ರಯಾಣವನ್ನು ಹೊರತುಪಡಿಸುವಂತೆಯೂ ಸೂಚಿಸಲಾಗಿದೆ.