HEALTH TIPS

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ | ದಾಂದಲೆ, ಘರ್ಷಣೆ, ಮತಪತ್ರಕ್ಕೆ ಬೆಂಕಿ

               ಕೋಲ್ಕತ್ತ: ಮತಗಟ್ಟೆಗಳಲ್ಲಿ ದಾಂದಲೆ, ಮತಪಟ್ಟಿಗೆ ಹಾಗೂ ಮತಪತ್ರಗಳಿಗೆ ಬೆಂಕಿ, ನಕಲಿ ಮತದಾನಕ್ಕೆ ಅವ್ಯಾಹತವಾಗಿ ನಡೆದ ಯತ್ನ, ಕೇಂದ್ರ ಮೀಸಲು ಪಡೆಗಳ ತ್ವರಿತ ನಿಯೋಜನೆಗೆ ಆಗ್ರಹಪಡಿಸಿ ವಿಷದ ಬಾಟಲಿ ಹಿಡಿದು ಅಧಿಕಾರಿಗಳಿಗೆ ಮಹಿಳೆಯರ ಘೇರಾವ್‌...

               ಪಶ್ಚಿಮ ಬಂಗಾಳದ ವಿವಿಧ ಪಂಚಾಯಿತಿಗಳ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಕೃತ್ಯಗಳ ಸ್ಥೂಲನೋಟ ಇದು.

                  12 ಜನರನ್ನು ಬಲಿಪಡೆದ, ಹಲವು ಗಾಯಗೊಂಡಿರುವ ಈ ಹಿಂಸಾಕೃತ್ಯಗಳಿಗೆ ಸಂಬಂಧಿಸಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಎಂ ಪಕ್ಷಗಳು ಪರಸ್ಪರರ ವಿರುದ್ಧ ಆರೋಪದಲ್ಲಿ ತೊಡಗಿವೆ.

                   ಕಾನೂನು ಸುವ್ಯವಸ್ಥೆ ಕುರಿತ ಪ್ರತ್ಯಕ್ಷದರ್ಶಿ ಮಾಹಿತಿ ಪಡೆಯಲು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದ ರಾಜ್ಯಪಾಲರಾದ ಸಿ.ವಿ.ಆನಂದ ಬೋಸ್‌ ಅವರು, 'ಇದು, ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ದಿನ. ಇಂಥ ಕೃತ್ಯಗಳ ನಡುವೆಯೂ ಜನ ಹಕ್ಕು ಚಲಾಯಿಸಬೇಕು' ಎಂದು ಹೇಳಿದರು.

                 'ದೂರು ಹೇಳಿಕೊಳ್ಳಲು ಜನರು ನನ್ನನ್ನು ಅಲ್ಲಲ್ಲಿ ಅಡ್ಡಗಟ್ಟಿದ್ದರು. ನಮ್ಮ ಸುತ್ತಲೇ ಕೊಲೆಗಳು ನಡೆಯುತ್ತಿವೆ ಎಂದು ದೂರಿದ್ದಾರೆ. ಮತಗಟ್ಟೆಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದೂ ಹೇಳಿದ್ದಾರೆ. ಇವು ಅಲ್ಲಲ್ಲಿ ನಡೆದಿರುವ ಘಟನೆಗಳು. ಆದರೆ, ರಕ್ತಪಾತದ ಕೃತ್ಯಗಳು ನಡೆದಿರುವುದು ಕಳವಳ ಉಂಟು ಮಾಡುತ್ತಿವೆ' ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದರು.

                    ದಾಂಧಲೆ, ಬೆಂಕಿ: ಕೂಚ್ ಬೆಹಾರ್ ಜಿಲ್ಲೆಯ ದಿನ್ಹಾಟಾದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ದಾಂಧಲೆ ನಡೆದಿದ್ದು, ಮತಪೆಟ್ಟಿಗೆಗಳನ್ನು ನಾಶಪಡಿಸಿ, ಮತಪತ್ರಗಳಿಗೆ ಬೆಂಕಿ ಹಾಕಲಾಗಿದೆ. ಬರ್ನಚಿನಾದಲ್ಲಿ ನಕಲಿ ಮತದಾನದ ಆರೋಪ ಮಾಡಿ, ಬೆಂಕಿ ಹಚ್ಚಲಾಗಿದೆ.

ಮತಗಟ್ಟೆ ಬಳಿಯ ಹಿಂಸೆಯಿಂದ ನಲುಗಿದ ಮಹಿಳೆಯರು ಕೇಂದ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲು ಒತ್ತಾಯಿಸಿ ನಂದಿಗ್ರಾಮದಲ್ಲಿ ವಿಷದ ಬಾಟಲಿ ಹಿಡಿದು ಅಧಿಕಾರಿಗಳಿಗೆ ಘೇರಾವ್ ಹಾಕಿದ್ದಾರೆ. ಇದೇ ಬೇಡಿಕೆಗೆ ಸಂಬಂಧಿಸಿ ವಿವಿಧೆಡೆಯೂ ಪ್ರತಿಭಟನೆಗಳು ನಡೆದಿವೆ.

ರಾಜ್ಯಪಾಲರು ಉತ್ತರ 24 ಪರಗಣ, ದಕ್ಷಿಣ 24 ಪರಗಣ ಜಿಲ್ಲೆಗಳು ಸೇರಿ ವಿವಿಧೆಡೆ ಭೇಟಿ ನೀಡಿದ್ದು, ಸಂತ್ರಸ್ತರನ್ನು ಭೇಟಿಯಾಗಿ ಘಟನೆಗಳ ಮಾಹಿತಿಯನ್ನು ಪಡೆದಿದ್ದಾರೆ.

                   ಚುನಾವಣೆ ಅಸಿಂಧು ಘೋಷಣೆಗೆ ಆಗ್ರಹ: ಈ ಮಧ್ಯೆ, ಕಾಂಗ್ರೆಸ್‌ ಮುಖಂಡ ಕೌಸ್ತವ್‌ ಬಾಗ್ಚಿ ಅವರು ಕಲ್ಕತ್ತ ಹೈಕೋರ್ಟ್‌ ಮೊರೆ ಹೋಗಿದ್ದು, ಚುನಾವಣೆಯನ್ನು ಅಸಿಂಧು ಎಂದು ಘೋಷಿಸಲು ಆಗ್ರಹಪಡಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆಗೂ ಮನವಿ ಮಾಡಿದ್ದಾರೆ.

               'ಪ್ರಕರಣದ ವಿಚಾರಣೆಗೆ ವಿಶೇಷ ಪೀಠ ಸ್ಥಾಪಿಸಬೇಕು. ಹೈಕೋರ್ಟ್‌ನ ಹಿಂದಿನ ಆದೇಶದ ಉಲ್ಲಂಘನೆ, ಹಿಂಸಾಕೃತ್ಯಗಳನ್ನು ಗಮನಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಬೇಕು ಎಂದು ವಕೀಲರು ಆದ ಅವರು ಮುಖ್ಯ ನ್ಯಾಯಮೂರ್ತಿ ಅವರಿಗೆ ಕೋರಿದ್ದಾರೆ.

                                              ಪಕ್ಷಗಳ ಖಂಡನೆ ಪರಸ್ಪರ ಕೆಸರೆರಚಾಟ

                ಪಂಚಾಯಿತಿ ಚುನಾವಣಾ ಹಿಂಸಾಕೃತ್ಯಗಳನ್ನು ವಿವಿಧ ರಾಜಕೀಯ ಪಕ್ಷಗಳು ಕಟುವಾಗಿ ಖಂಡಿಸಿದ್ದು ಪರಸ್ಪರರ ವಿರುದ್ಧ ಆರೋಪ ಮಾಡಿವೆ. ಹಿಂಸೆಯಲ್ಲಿ 8 ಕಾರ್ಯಕರ್ತರನ್ನು ಕಳೆದುಕೊಂಡಿರುವ ತೃಣಮೂಲ ಕಾಂಗ್ರೆಸ್‌ 'ವಿರೋಧ ಪಕ್ಷಗಳು ಹಿಂಸೆಗೆ ಪ್ರಚೋದನೆ ನೀಡಿವೆ. ಭದ್ರತೆಗೆ ನಿಯೋಜಿಸಿದ್ದ ಕೇಂದ್ರ ಮೀಸಲು ಪಡೆಗಳು ಗಲಭೆ ನಿಯಂತ್ರಿಸಲು ವಿಫಲವಾಗಿವೆ' ಎಂದು ಆರೋಪಿಸಿದೆ. ಟಿಎಂಸಿ ಈ ಬಗ್ಗೆ ಹೇಳಿಕೆ ನೀಡಿದ್ದು 'ಜೂನ್‌ 8ರಂದು ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿಯವರೆಗೆ 27 ಜನರು ಸತ್ತಿದ್ದಾರೆ. ಇವರಲ್ಲಿ ಶೇ 60ರಷ್ಟು ಜನರು ತೃಣಮೂಲ ಪಕ್ಷದವರೇ ಆಗಿದ್ದಾರೆ' ಎಂದು ಹೇಳಿದೆ. ಹಿರಿಯ ಸಚಿವ ಶಶಿ ಪಂಜಾ 'ಶುಕ್ರವಾರ ರಾತ್ರಿಯಿಂದ ದಿಗ್ಭ್ರಮೆ ಮೂಡಿಸುವ ಬೆಳವಣಿಗೆಗಳು ವರದಿ ಆಗುತ್ತಿವೆ. ಬಿಜೆಪಿ ಸಿಪಿಎಂ ಕಾಂಗ್ರೆಸ್‌ ಪರಸ್ಪರ ಕೈಜೋಡಿಸಿವೆ. ಟಿಎಂಸಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಎಲ್ಲಿವೆ ಕೇಂದ್ರ ಮೀಸಲು ಪಡೆಗಳು' ಎಂದು ಪ್ರಶ್ನಿಸಿದ್ದಾರೆ. ವಿರೋಧಪಕ್ಷದ ನಾಯಕ ಬಿಜೆಪಿಯ ಸುವೇಂಧು ಅಧಿಕಾರಿ ಅವರು 'ಆಂತರಿಕ ಗಲಭೆ ಬಾಹ್ಯ ಪ್ರಚೋದನೆಯಿಂದ ಜನರಿಗೆ ರಕ್ಷಣೆ ನೀಡುವುದು ಸಂವಿಧಾನದ ವಿಧಿ 355ರ ಅನ್ವಯ ಕೇಂದ್ರದ ಹೊಣೆ. ಹೀಗಾಗಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಿಎಂದು ಆಗ್ರಹಪಡಿಸಿದರು. ಬಿಜೆಪಿ ನಾಯಕ ರಾಹುಲ್‌ ಸಿನ್ಹಾ ಅವರು ರಾಜ್ಯ ಚುನಾವಣಾ ಆಯೋಗವು ಟಿಎಂಸಿ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ. ಕೆಲವು ಮತಗಟ್ಟೆಗಳಲ್ಲಿ ಕೇಂದ್ರ ಮೀಸಲು ಪಡೆ ನಿಯೋಜಿಸದೇ ಇರುವುದೇ ಇದಕ್ಕೆ ನಿದರ್ಶನ ಎಂದು ಆರೋಪಿಸಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೈಕೋರ್ಟ್‌ ಅದೇಶದ ನಂತರವೂ ಕೇಂದ್ರ ಮೀಸಲು ಪಡೆಯ ಸಮರ್ಪಕ ನಿಯೋಜನೆ ಆಗಿರಲಿಲ್ಲ' ಎಂದರೆ ಮತ್ತೊಬ್ಬ ಮುಖಂಡ ಡಾ.ಸುಜನ್ ಚಕ್ರವರ್ತಿ 'ಟಿಎಂಸಿ ಈ ಎಲ್ಲ ಕೃತ್ಯಗಳ ಹಿಂದಿದೆ' ಎಂದು ಆರೋಪಿಸಿದರು.

                                                    ಇದು ಬ್ಯಾಲೆಟ್ಸ್‌ ಬುಲೆಟ್ಸ್ ಹೋರಾಟ -ರಾಜ್ಯಪಾಲ

               ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು ಹಿಂಸಾಕೃತ್ಯಗಳು ನಡೆದ ವಿವಿಧ ಸ್ಥಳಗಳಿಗೆ ಖುದ್ದು ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿದರು. ಬಾಂಬ್‌ ಸ್ಫೋಟ ಕೃತ್ಯದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಭೇಟಿ ಮಾಡಿ ಘಟನೆಯ ವಿವರ ಪಡೆದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು 'ಪಂಚಾಯಿತಿ ಚುನಾವಣೆ ಬ್ಯಾಲಟ್ಸ್‌ (ಮತಪತ್ರ) ಮತ್ತು ಬುಲೆಟ್ ನಡುವಣ ಹೋರಾಟವಾಗಿದೆ' ಎಂದು ಬಣ್ಣಿಸಿದರು. ನಾನು ಪರಿಸ್ಥಿತಿಯನ್ನು ಅವಲೋಕಿಸಿದ್ದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದರು. ಚುನಾವಣೆ ದಿನ ರಾಜ್ಯಪಾಲರ ಪಾತ್ರ ಕುರಿತ ಪ್ರಶ್ನೆಗೆ 'ಸಾರ್ವಜನಿಕ ಹಿತಾಸಕ್ತಿ ರಕ್ಷಣೆಯಾಗುತ್ತಿದೆ ಹಾಗೂ ಪ್ರತಿಯೊಬ್ಬರು ಸಂವಿಧಾನವನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದೇನೆ' ಎಂದರು. 'ಜನರು ಮಕ್ತವಾಗಿ ಬಂದು ಮತ ಚಲಾಯಿಸಬೇಕು. ಮತದಾನದ ದಿನದಂದು ನಾನು ಕೂಡಾ ನನ್ನ ತಂಡದ ಜೊತೆಗೆ ಗಸ್ತು ಮಾಡುತ್ತೇನೆ' ಎಂದು ಅವರು ಶುಕ್ರವಾರವೇ ಭರವಸೆ ನೀಡಿದ್ದರು. ಗಸ್ತುವೇಳೆ ಶನಿವಾರ ಕಮರ್‌ಹಟಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ವಿವರವನ್ನು ಪಡೆದರು. ನಾಡಿಯಾ ಜಿಲ್ಲೆಗೆ ತೆರಳುವಾಗ ಕಲ್ಯಾಣಿ ಎಕ್ಸ್‌ಪ್ರೆಸ್‌ ವೇಯಲ್ಲಿ ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿಜೆಪಿ ಮತ್ತು ಸಿಪಿಐಎಂ ಬೆಂಬಲಿಗರು 'ಮತಗಳನ್ನು ಲೂಟಿ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು' ಎಂದು ಒತ್ತಾಯಿಸಿದರು.

                                                   ವಿವಿಧೆಡೆ ಗುಂಪು ಘರ್ಷಣೆ ಸಾವು

                 ಕೂಚ್‌ಬೆಹಾರ್ ಜಿಲ್ಲೆಯ ಫಲಿಮರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತ ಮದಾಬ್‌ ಬಿಸ್ವಾಸ್‌ ಮೃತಪಟ್ಟಿದ್ದಾರೆ. ಮತಗಟ್ಟೆ ಪ್ರವೇಶಿಸದಂತೆ ತಡೆದ ಟಿಎಂಸಿ ಬೆಂಬಲಿಗರು ಹಲ್ಲೆ ಮಾಡಿದರು ಎನ್ನಲಾಗಿದೆ. ಟಿಎಂಸಿ ಈ ಆರೋಪವನ್ನು ನಿರಾಕರಿಸಿದೆ. ಉತ್ತರ 24 ಪರಗಣ ಜಿಲ್ಲೆಯ ಕದಂಬಗಾಚಿಯಲ್ಲಿ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗ ಅಬ್ದುಲ್ಲಾ ಅಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕರಗ್ರಾಮ್‌ನಲ್ಲಿ ಟಿಎಂಸಿ ಕಾರ್ಯಕರ್ತ ತುಫಗಾನಿ ಪಂಚಾಯಿತಿ ಸಮಿತಿ ವ್ಯಾಪ್ತಿಯಲ್ಲಿ ಟಿಎಂಸಿ ಕಾರ್ಯಕರ್ತ ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿ ನಾಯಕನ ಸಹೋದರ ಮಾಲೇಕ್‌ ಶೇಖ್‌ ಹರಿನ್‌ಘಾಟಾದಲ್ಲಿ ಐಎಸ್‌ಎಫ್‌ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾರೆ. ಹರಿನ್‌ಘಾಟಾದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಐಎಸ್‌ಎಫ್‌ ಕಾರ್ಯಕರ್ತ 48 ವರ್ಷದ ಸೈದುಲ್‌ ಶೇಖ್‌ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಟಿಎಂಸಿ ಕಾರ್ಯಕರ್ತರ ಹಲ್ಲೆಯಿಂದ ಶೇಖ್‌ ಮೃತಪಟ್ಟರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ ಟಿಎಂಸಿ ನಾಡಿಯಾ ಘಟಕದ ಅಧ್ಯಕ್ಷ ದೇಬಶೀಶ್‌ ಗಂಗೂಲಿ ಇದನ್ನು ನಿರಾಕರಿಸಿದ್ದಾರೆ. 'ಐಎಸ್‌ಎಫ್‌ ಬೆಂಬಲಿಗರು ಟಿಎಂಸಿ ಕಾರ್ಯಕರ್ತರ ಮೇಲೆ ಕಚ್ಚಾ ಬಾಂಬ್‌ ಪ್ರಯೋಗಿಸಿದರು. ಒಂದು ಬಾಂಬ್‌ ಕೈತಪ್ಪಿ ಬಿದ್ದು ಸ್ಫೋಟಿಸಿ ಶೇಖ್ ಮೃತಪಟ್ಟರು' ಎಂದಿದ್ದಾರೆ. ಅಂತೆಯೇ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿಯಲ್ಲಿ 38 ವರ್ಷದ ವ್ಯಕ್ತಿ ಮುರ್ಷಿದಾಬಾದ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಯಾಸ್ಮಿನ್ ಗುಂಪು ಘರ್ಷಣೆಯಲ್ಲಿ ಮೃತಪಟ್ಟರೆ ಪೂರ್ವ ವರ್ಧಮಾನ್‌ ಜಿಲ್ಲೆಯ ಔಷ್‌ಗ್ರಾಮ್‌ 2ನೇ ಬ್ಲಾಕ್‌ನಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರು ಗಾಯಗೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries