ಪಿಥೋರಗಢ್: ಕೈಲಾಸ ಪರ್ವತ ದರ್ಶನಕ್ಕೆ ಸೆಪ್ಟೆಂಬರ್‌ನಿಂದ ಭಾರತದಿಂದಲೇ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ಸೆಪ್ಟೆಂಬರ್‌ನಿಂದ ಭಾರತದಿಂದಲೇ ಯಾತ್ರಾರ್ಥಿಗಳು ಶಿವನ ವಾಸಸ್ಥಾನವೆಂದು ನಂಬಲಾದ ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‍ಒ) ಪಿಥೋರಗಢ್ ಜಿಲ್ಲೆಯ ನಾಭಿಧಾಂಗ್‍ನಲ್ಲಿರುವ ಕೆಎಂವಿಎನ್ ಹಟ್ಸ್‍ನಿಂದ ಭಾರತ-ಚೀನಾ ಗಡಿಯಲ್ಲಿರುವ ಲಿಪುಲೇಖ್ ಪಾಸ್‍ವರೆಗಿನ ರಸ್ತೆಯನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದೆ, ಇದು ಸೆಪ್ಟೆಂಬರ್‍ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಆರ್ ಒ ಡೈಮಂಡ್ ಪ್ರಾಜೆಕ್ಟ್ ನ ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ ಮಾತನಾಡಿ, ನಾಭಿಧಾಂಗ್ ನ ಕೆಎಂವಿಎನ್ ಹಟ್ಸ್ ನಿಂದ ಲಿಪುಲೇಖ್ ಪಾಸ್ ವರೆಗೆ ಸುಮಾರು ಆರೂವರೆ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಇದು ಪೂರ್ಣಗೊಂಡ ನಂತರ, ರಸ್ತೆಯ ಉದ್ದಕ್ಕೂ ಕೈಲಾಶ್ ವ್ಯೂ ಪಾಯಿಂಟ್‍ಸಿದ್ಧವಾಗಲಿದೆ. ಹಿರಾಕ್ ಯೋಜನೆಗೆ ಭಾರತ ಸರ್ಕಾರವು ಕೈಲಾಶ್ ವ್ಯೂ ಪಾಯಿಂಟ್ ಅನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ನೀಡಿದೆ. ಪರ್ವತದ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಸಾಹಸಮಯ ಕಾಮಗಾರಿ ನಡೆದಿದ್ದು, ಹವಾಮಾನ ಅನುಕೂಲಕರವಾಗಿದ್ದರೆ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಗೋಸ್ವಾಮಿ ಹೇಳಿದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ಲಿಪುಲೇಖ್ ಪಾಸ್ ಮೂಲಕ ಕೈಲಾಶ್-ಮಾನಸಸರೋವರ ಯಾತ್ರೆ ಪುನರಾರಂಭಗೊಂಡಿಲ್ಲ. ಇದಕ್ಕೆ ಚೀನಾದ ಅನುಮತಿ ಬೇಕಾಗಿತ್ತು ಹಲವು ಅಡಚಣೆ ಎದುರಾಗುತ್ತಿತ್ತು. ಆದರೆ ಈಗ ಕೈಲಾಸ ಪರ್ವತದ ದರ್ಶನವನ್ನು ಭಕ್ತರಿಗೆ ಪರ್ಯಾಯ ಮಾರ್ಗವನ್ನು ರೂಪಿಸುವಲ್ಲಿ ಭಾರತ ಸರ್ಕಾರದ ಹೊಸ ಪ್ರಯತ್ನಕ್ಕೆ ಮುಂದಾಗಿದೆ.