1800ರಲ್ಲಿ ಅಲೆಸ್ಯಾಂಡ್ರೊ ವೊಲ್ಟಾ ಅವರು ತಾಮ್ರ ಮತ್ತು ಸತುವನ್ನು ಬಳಸಿ ಮೊದಲ ಬಾರಿಗೆ ಬ್ಯಾಟರಿ ಕಂಡುಹಿಡಿದರು. ಇದಾಗಿ ಆರು ದಶಕಗಳ ಬಳಿಕ ರಿಚಾರ್ಜಬಲ್ ಬ್ಯಾಟರಿ ಕಂಡುಹಿಡಿಯಲಾಯಿತು. ನಂತರ ಬಹುಬಗೆಯ ರೀಚಾರ್ಜಬಲ್ ಬ್ಯಾಟರಿಗಳು ಅಭಿವೃದ್ಧಿಗೊಂಡರೂ, ನೊಬೆಲ್ ಪ್ರಶಸ್ತಿ ಪುರಸ್ಖೃತ ರಸಾಯನವಿಜ್ಞಾನಿ ಜಾನ್ ಗುಡ್‌ಎನಫ್ ಅಭಿವೃದ್ಧಿಪಡಿಸಿದ ಲೀಥಿಯಂ ಅಯಾನ್ ಬ್ಯಾಟರಿ ಐದು ದಶಕಗಳಿಂದಲೂ ಬ್ಯಾಟರಿ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ನೋಬೆಲ್ ಪ್ರಶಸ್ತಿ ಪುರಸ್ಖೃತ ರಸಾಯನ ವಿಜ್ಞಾನಿ ಜಾನ್ ಗುಡ್‌ಎನಫ್ ಅವರು ಲೀಥಿಯಂ ಅಯಾನ್ ಬ್ಯಾಟರಿ ಕಂಡು ಹಿಡಿದು ಅರ್ಧ ಶತಮಾನ ಕಳೆದಿದೆ. ಮೊಬೈಲ್‌ನಿಂದ ಹಿಡಿದು ವಿದ್ಯುತ್ ಚಾಲಿತ ವಾಹನದವರೆಗೂ ತೀರಾ ಅಗತ್ಯವೆನಿಸಿರುವ ಈ ರಾಸಾಯನಿಕ ಬ್ಯಾಟರಿ ಬೆಲೆಯಲ್ಲಿ ಅಗ್ಗ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನೂ ಹೊಂದಿರುವಂತದ್ದು ಎಂದೇ ತಂತ್ರಜ್ಞಾನ ಕ್ಷೇತ್ರ ಒಪ್ಪಿಕೊಂಡಿದೆ.
ಆದರೆ, ಇದೀಗ ಲೀಥಿಯಂ ಅಯಾನ್ ಬ್ಯಾಟರಿಗಿಂತಲೂ ವೇಗವಾಗಿ ಚಾರ್ಜ್ ಆಗುವಂತದ್ದು, ದೀರ್ಘ ಬಾಳಿಕೆ ಹಾಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ವಿಜ್ಞಾನಿಗಳು ಇಂದಿಗೂ ಸಂಶೋಧನೆ ಮುಂದುವರಿಸಿದ್ದಾರೆ. ಅದರಲ್ಲೂ ಹಿಂದೆಂದಿಗಿಂತಲೂ ಇಂಥ ಬ್ಯಾಟರಿಗಳ ಬಳಕೆ ಈಗ ಹೆಚ್ಚಾಗಿದೆ.
ಹೀಗಾಗಿ ಲೀಥಿಯಂ ಅಯಾನ್ ಬ್ಯಾಟರಿಗೆ ಪರ್ಯಾಯವಾಗಿ ಘನರೂಪದ ಸಾಲಿಡ್ ಸ್ಟೇಟ್ ಬ್ಯಾಟರೀಸ್, ಕೊಬಾಲ್ಟ್ ರಹಿತ ಲೀಥಿಯಂ ಅಯಾನ್ ಬ್ಯಾಟರಿ, ಸೋಡಿಯಂ ಅಯಾನ್ ಬ್ಯಾಟರಿ, ಐರನ್-ಏರ್ ಬ್ಯಾಟರಿ, ಝಿಂಕ್ ಆಧಾರಿತ ಬ್ಯಾಟರಿಗಳು ಸದ್ಯ ಸುದ್ದಿಯಲ್ಲಿವೆ.
ಹಲವು ಸಂದರ್ಭಗಳಲ್ಲಿ ಈ ಪರ್ಯಾಯ ರಾಸಾಯನಿಕ ಬ್ಯಾಟರಿಗಳು ಲೀಥಿಯಂ ಅಯಾನ್‌ನಂತೆಯೇ ಕೆಲಸ ಮಾಡುತ್ತವೆ. ಆದರೆ ಬೇರೆ ರಾಸಾಯನಿಕಗಳನ್ನು ಹೊಂದಿವೆಯಷ್ಟೇ. ಅದರಲ್ಲೂ ದೀರ್ಘ ಕಾಲದವರೆಗೆ ಬ್ಯಾಟರಿ ಲೈಫ್ ಹೊಂದಿರುವ ಮೊಬೈಲ್ ಬಳಕೆ ಮತ್ತು ಬ್ಯಾಟರಿ ಚಾಲಿತ ವಾಹನಗಳು ಕ್ರಮಿಸುವ ದೂರ ಹೆಚ್ಚಿಸುವ ವಿಷಯಕ್ಕೆ ಬಂದಾಗಿ ಲೀಥಿಯಂ ಅಯಾನ್ ಇಂದಿಗೂ ಅಗ್ರಸ್ಥಾನದಲ್ಲೇ ನಿಂತಿದೆ.
ಕೇವಲ ಕಾರ್ಯಕ್ಷಮತೆ ಮಾತ್ರವಲ್ಲದೇ, ಸುರಕ್ಷತೆ, ಅಗ್ನಿ ಆಕಸ್ಮಿಕಗಳಂತ ಅಪಾಯಗಳಿಂದ ರಕ್ಷಣೆ ಹಾಗೂ ಸುಸ್ಥಿರತೆ ವಿಷಯದಲ್ಲೂ ಲೀಥಿಯಂ ಅಯಾನ್ ಬ್ಯಾಟರಿಯಲ್ಲಿ ಬಳಸಿರುವ ಕೊಬಾಲ್ಟ್, ನಿಕ್ಕಲ್ ಹಾಗೂ ಮ್ಯಾಗ್ನೀಷಿಯಂ ಧಾತುಗಳು ಈಗಲೂ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ತಯಾರಕರ ಅಚ್ಚುಮೆಚ್ಚು.
ಲೀಥಿಯಂ ಅಯಾನ್ ಬ್ಯಾಟರಿ ಹೇಗೆ ಕೆಲಸ ಮಾಡುತ್ತದೆ?
ಬ್ಯಾಟರಿಯಲ್ಲಿನ ಧನಾತ್ಮಕವಾಗಿ ಚಾರ್ಜ್ ಆಗಿರುವ ವಿದ್ಯುತ್‌ವಾಹಕ ಎಲೆಕ್ಟ್ರೋಡ್ ಹಾಗೂ ಋಣಾತ್ಮಕವಾಗಿ ಚಾರ್ಜ್ ಆಗುವ ಋಣದ್ವಾರ ಕ್ಯಾಥೋಡ್ ಇರುವ ವಿದ್ಯುತ್ ಮಾರ್ಗದಿಂದ ಎಲೆಕ್ಟ್ರಾನ್‌ಗಳು ನಿರ್ಗಮಿಸುವ ಸ್ಥಳದಲ್ಲಿ ಲೀಥಿಯಂ ಎಂಬ ರಾಸಾಯನಿಕ ಇರುತ್ತದೆ.
ಧನಾತ್ಮಕವಾಗಿ ಚಾರ್ಜ್ ಆಗಿರುವ ಅಯಾನ್‌ಗಳನ್ನು ಆಯನೋಡ್ ಮತ್ತು ಕ್ಯಾಥೋಡ್ ನಡುವೆ ದ್ವವರೂಪದ ಎಲೆಕ್ಟ್ರೋಲೈಟ್ ಸಾಗಿಸುತ್ತದೆ. ಇದು ಅನೋಡ್‌ನಲ್ಲಿರುವ ಎಲೆಕ್ಟ್ರಾನ್‌ಗಳು ಮುಕ್ತವಾಗಿ ಸಂಚರಿಸಲು ನೆರವಾಗಲಿದೆ. ಇದರಿಂದಾಗಿ ಬ್ಯಾಟರಿಯಲ್ಲಿರುವ ಇಂಧನ ಬಳಕೆಯ ಸಂದರ್ಭದಲ್ಲಿ ಲೀಥಿಯಂ ಅಯಾನ್‌ಗಳನ್ನು ಅನೋಡ್ ಕ್ಯಾಥೋಡ್ ಕಡೆ ಕಳುಹಿಸುತ್ತದೆ. ಚಾರ್ಜ್ ಆಗುವಾಗ ಕ್ಯಾಥೋಡ್ ಅದನ್ನು ಮರಳಿಸುತ್ತದೆ.
ಇದು ಲೀಥಿಯಂ ಅಯಾನ್ ಕಾರ್ಯವೈಖರಿ. ಆದರೆ ಇದಕ್ಕೆ ಪರ್ಯಾಯವಾಗಿರುವ ಇನ್ನೂ ಹಲವು ಬಗೆಯ ರಾಸಾಯನಿಕಗಳುಳ್ಳ ಬ್ಯಾಟರಿಗಳ ಬಳಕೆ ಈಗ ಜನಪ್ರಿಯತೆ ಪಡೆಯುತ್ತಿದೆ.
ಸಾಲಿಡ್ ಸ್ಟೇಟ್ ಬ್ಯಾಟರೀಸ್
ದ್ರವರೂಪದ ಅಥವಾ ಜೆಲ್ ರೂಪದ ಎಲೆಕ್ಟ್ರೋಲೈಟ್‌ಗಳ ಮೇಲಿನ ಅವಲಂಬನೆ ತಪ್ಪಿಸಲು, ಘನ ರೂಪದ ಬ್ಯಾಟರಿಗಳ ಬಳಕೆಯೇ ಸಾಲಿಡ್ ಸ್ಟೇಟ್ ಬ್ಯಾಟರೀಸ್.
ಇವುಗಳನ್ನು ಸೆರಾಮಿಕ್, ಗಾಜು, ಘನ ರೂಪದ ಪಾಲಿಮರ್ ಅಥವಾ ಸಲ್ಫೈಟ್‌ನಿಂದ ತಯಾರಿಸಲಾಗುತ್ತದೆ. ಇದೇ ವರ್ಷದ ಆರಂಭದಲ್ಲಿ ಇಂಥ ಸಾಲಿಡ್ ಸ್ಟೇಟ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಜರ್ಮನಿಯ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯೂ ಹೇಳಿತ್ತು. ತನ್ನ ಬ್ಯಾಟರಿ ಚಾಲಿತ ಕಾರುಗಳಲ್ಲಿ ಸಲ್ಫೈಡ್ ಎಲೆಕ್ಟ್ರೋಲೈಟ್ ಬಳಸುತ್ತಿರುವುದಾಗಿಯೂ ಹೇಳಿತ್ತು.
ಇಂಥ ತಂತ್ರಜ್ಞಾನದ ಬ್ಯಾಟರಿಗಳನ್ನು ಸದ್ಯ ಕೆಲ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಹಾಗೂ ಪೇಸ್‌ಮೇಕರ್‌ಗಳಲ್ಲಿ ಬಳಸಲಾಗುತ್ತಿದೆ. ಸಾಲಿಡ್ ಸ್ಟೇಟ್ ಬ್ಯಾಟರಿ ಅಧಿಕ ಕಾರ್ಯಕ್ಷಮತೆ ಹೊಂದಿದೆ. ಅಧಿಕ ಚಾರ್ಜ್ ಹಿಡಿದುಕೊಳ್ಳಬಹುದು. ಗಾತ್ರವೂ ಚಿಕ್ಕದಾಗಿರಲಿದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳಲ್ಲಿ ಕಡಿಮೆ ಸ್ಥಳವನ್ನು ಇದು ಬೇಡುತ್ತದೆ. ದೀರ್ಘ ಬಾಳಿಕೆ ಬರುತ್ತದೆ. ತನ್ನ ಒಟ್ಟು ಅವಧಿಯಲ್ಲಿ ಹೆಚ್ಚು ಬಾರಿ ಚಾರ್ಜ್ ಮಾಡಬಹುದಾಗಿದೆ. ಘನರೂಪದ ಎಲೆಕ್ಟ್ರೋಲೈಟ್ ಬಳಸುತ್ತಿರುವುದರಿಂದ ಅಗ್ನಿ ಆಕಸ್ಮಿಕ ಸಂಭವಿಸುವ ಸಾಧ್ಯತೆ ಕಡಿಮೆ.
ಲೀಥಿಯಂ ಸಲ್ಫರ್ ಬ್ಯಾಟರೀಸ್
ಬ್ಯಾಟರಿ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನದಲ್ಲಿ ಗಂಧಕವನ್ನು ಬ್ಯಾಟರಿಗಳ ಕ್ಯಾಥೋಡ್‌ನಲ್ಲಿ ಬಳಕೆ ಮಾಡಲಾಗುತ್ತಿದೆ. ಈ ರಾಸಾಯನಿಕವು ಲೀಥಿಯಂ ಲೋಹದ ಜತೆಗಿರುವ ನಿಕ್ಕಲ್ ಮತ್ತು ಕೊಬಾಲ್ಟ್ ಧಾತುಗಳಿಗಿಂತಲೂ ಹೆಚ್ಚು ಸುಸ್ಥಿರ.
ಬ್ಯಾಟರಿ ಚಾಲಿತ ವಾಹನ ತಯಾರಿಕ ಕಂಪನಿ ಕೊನಾಮಿಕ್ಸ್, ಈ ರಾಸಾಯನಿಕ ಮಿಶ್ರಣದ ಬ್ಯಾಟರಿ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಲೀಥಿಯಂ ಸಲ್ಫರ್ ವಾಣಿಜ್ಯ ಬಳಕೆಗೆ ಲಭ್ಯ. ಇಷ್ಟು ಮಾತ್ರವಲ್ಲ, ವಿಮಾ ಹಾಗೂ ರೈಲಿನಲ್ಲೂ ಇದನ್ನು ಬಳಕೆ ಮಾಡುವತ್ತ ಹಾಗೂ ವಿದ್ಯುತ್ ಶೇಖರಣೆಗೂ ಸಂಶೋಧನೆಗಳು ನಡೆದಿವೆ.
ಗಂಧಕ ತುಸು ಅಗ್ಗ ಮತ್ತು ಹೇರಳವಾಗಿ ಲಭ್ಯ. ಈ ಕಾರಣಕ್ಕಾಗಿ ಈ ಬ್ಯಾಟರಿ ಕೈಗೆಟಕುವ ಬೆಲೆಗೆ ಲಭ್ಯವಾಗಬಹುದು. ತಯಾರಿಕೆ ವೆಚ್ಚವೂ ಲೀಥಿಯಂ ಅಯಾನ್ ಬ್ಯಾಟರಿಗಿಂತ ಶೇ 25ರಷ್ಟು ಕಡಿಮೆಯಾಗಲಿದೆ. ತುಕ್ಕು ಹಿಡಿಯುವ ಸಮಸ್ಯೆಯನ್ನು ಈ ಬ್ಯಾಟರಿ ಎದುರಿಸುತ್ತಿದೆ. ಆದರೆ ಈ ನಿಟ್ಟಿನಲ್ಲೂ ಸಂಶೋಧನೆಗಳು ನಡೆಯುತ್ತಿವೆ.
ಕೊಬಾಲ್ಟ್ ರಹಿತ ಲೀಥಿಯಂ ಅಯಾನ್ ಬ್ಯಾಟರಿ
ಇದು ಕೂಡಾ ಲೀಥಿಯಂ ಅಯಾನ್ ಬ್ಯಾಟರಿಯಂತೆಯೇ ಕಾರ್ಯ ನಿರ್ವಹಿಸಲಿದೆ. ಆದರೆ ಕ್ಯಾಥೋಡ್ ಅನ್ನು ಉತ್ತೇಜಿಸುವ ಕೊಬಾಲ್ಟ್ ಇದರಲ್ಲಿ ಇರುವುದಿಲ್ಲ.
ಹೆಚ್ಚಾಗಿ ಬ್ಯಾಟರಿ ಚಾಲಿತ ವಾಹನಗಳಲ್ಲಿ ಕೊಬಾಲ್ಟ್ ರಹಿತ ಬ್ಯಾಟರಿಗಳ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಸದ್ಯ ಟೆಸ್ಲಾ ಕಾರುಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಕೊಬಾಲ್ಟ್ ಬದಲು ಲಿಥಿಯಂ ಐರನ್ ಫಾಸ್ಪೇಟ್ ಬಳಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಶೀಘ್ರದಲ್ಲಿ ಫೋರ್ಡ್, ಫೋಕ್ಸ್‌ವ್ಯಾಗನ್ ಕೂಡಾ ಬಳಸುವ ಕುರಿತು ಸುದ್ದಿಯಾಗಿದೆ.
ದುಬಾರಿ ಬೆಲೆಯ ಕೊಬಾಲ್ಟ್ ಇಲ್ಲದಿರುವುದರಿಂದ ಇದು ಅಗ್ಗ. ಕೊಬಾಲ್ಟ್ ಗಣಿಗಾರಿಕೆ ಮಾನವಹಕ್ಕುಗಳ ಉಲ್ಲಂಘನೆ ಎಂದೇ ಹೇಳಲಾಗುತ್ತದೆ. 2030ರ ಹೊತ್ತಿಗೆ ಅಮೆರಿಕದ ಇಂಧನ ಇಲಾಖೆಯು ಲೀಥಿಯಂ ಬ್ಯಾಟರಿಗಳಲ್ಲಿ ಕೊಬಾಲ್ಟ್ ಬಳಕೆಗೆ ತಿಲಾಂಜಲಿ ನೀಡುವುದಾಗಿ ಘೋಷಿಸಿದೆ.
ಸೋಡಿಯಂ ಅಯಾನ್ ಬ್ಯಾಟರಿ
ಲೀಥಿಯಂ ಅಯಾನ್ ಬ್ಯಾಟರಿಯಂತೆಯೇ ಇರುವ ಸೋಡಿಯಂ ಅಯಾನ್ ಬ್ಯಾಟರಿಯಲ್ಲಿ ಉಪ್ಪಿನನೀರನ್ನು ಎಲೆಕ್ಟ್ರೊಲೈಟ್ ಆಗಿ ಬಳಕೆ ಮಾಡಲಾಗುತ್ತದೆ. ಇಂಧನ ಶೇಖರಣೆಗೆ ಇದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಲೀಥಿಯಂ ಅಯಾನ್ ಬ್ಯಾಟರಿಯ ಒಟ್ಟು ಗಾತ್ರದ ಮೂರನೇ ಎರಡರಷ್ಟು ಶಕ್ತಿಯನ್ನು ಇದು ಶೇಖರಿಸಬಲ್ಲದು. ಇದರ ತಯಾರಿಕೆಗೆ ಹೆಚ್ಚು ಖರ್ಚು ತಗುಲದು. ಅಪಾಯದ ಪ್ರಮಾಣವೂ ಕಡಿಮೆ. ಪುನರ್ ಬಳಕೆಗೆ ನವೀಕರಣ ವೆಚ್ಚವೂ ಕಡಿಮೆ. ಆದರೆ ಬ್ಯಾಟರಿ ಚಾಲಿತ ವಾಹನಗಳಲ್ಲಿ ಇದರ ಕಾರ್ಯಕ್ಷಮತೆ ಅಷ್ಟಾಗಿ ಉತ್ತಮವಾಗಿಲ್ಲ ಎನ್ನುವುದು ತಜ್ಞರ ಅನಿಸಿಕೆ.
ಐರನ್-ಏರ್ ಬ್ಯಾಟರಿ
ಕಬ್ಬಿಣವನ್ನು ಉತ್ಕರ್ಷಣಕಾರಿಯಾಗಿ ಬಳಕೆ ಮಾಡುವ ಕ್ರಿಯೆಯಿಂದ ಐರನ್ ಏರ್ ಬ್ಯಾಟರಿ ಉತ್ಪಾದಿಸಲಾಗುತ್ತದೆ. ಕಬ್ಬಿಣ ವಾತಾವರಣಕ್ಕೆ ತೆರೆದುಕೊಂಡರೆ ತುಕ್ಕು ಹಿಡಿಯುತ್ತದೆ. ಅದರಿಂದಲೇ ಶಕ್ತಿ ಉತ್ಪಾದನೆಯಾಗುತ್ತದೆ. ಬ್ಯಾಟರಿ ಚಾರ್ಜ್ ಆಗುವಾಗ ಸೆಲ್‌ಗಳು ಮರು ಉತ್ಕರ್ಷಣ ಕ್ರಿಯೆಯಿಂದ ಈ ಸೆಲ್‌ಗಳು ಕಬ್ಬಿಣ ಸ್ವರೂಪಕ್ಕೆ ಮರಳುತ್ತವೆ.
ಇಂಧನ ಶೇಖರಣೆಗೆ ಈ ರಾಸಾಯನಿಕ ಸಮ್ಮಿಶ್ರಣದ ಬ್ಯಾಟರಿ ಅತ್ಯುತ್ತಮ ಎಂದೇ ತಜ್ಞರು ಹೇಳುತ್ತಾರೆ. ಲೀಥಿಯಂ ಅಯಾನ್ ಬ್ಯಾಟರಿಗಿಂತ 25 ಪಟ್ಟು ಹೆಚ್ಚು ಇಂಧನ ಶೇಖರಿಸಿಕೊಳ್ಳಬಹುದು. ಐರನ್-ಏರ್ ಬ್ಯಾಟರಿಗಳ ಉತ್ಪಾದನೆ ಮಿನ್ನೆಸೊಟಾದಲ್ಲಿರುವ ಘಟಕದಲ್ಲಿ 2024ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ.
ಲಭ್ಯವಿರುವ ಬ್ಯಾಟರಿಗಿಂತ ಈ ಬ್ಯಾಟರಿ 10 ಪಟ್ಟು ಕಡಿಮೆ ಬೆಲೆಗೆ ಲಭ್ಯ. 17 ಪಟ್ಟು ದೀರ್ಘ ಬಾಳಿಕೆ ಬರುವಂತದ್ದು. ಆದರೆ ಗಾತ್ರದಲ್ಲಿ ದೊಡ್ಡದು, ಮಂದ ಗತಿಯ ಚಾರ್ಜಿಂಗ್ ಇರುವುದರಿಂದಲೂ ಒಮ್ಮೆ ಮರುಯೋಚಿಸಬೇಕಾದ ವಿಷಯ. ಇವುಗಳನ್ನು ಬೃಹತ್ ಯಂತ್ರಗಳಲ್ಲಿ ಬಳಸಬಹುದು ಎಂದು ಪಾಪ್ಯುಲರ್ ಮೆಕಾನಿಕ್ಸ್ ವರದಿ ಮಾಡಿದೆ.
ಸತುವಿನ ಬ್ಯಾಟರಿ
ಲೀಥಿಯಂ ಅಯಾನ್‌ನಂತೆಯೇ ಸತು (ಝಿಂಕ್) ಭರಿತ ಬ್ಯಾಟರಿ ಕೆಲಸ ಮಾಡುತ್ತದೆ. ಇಲ್ಲಿ ಆಯನೋಡ್‌ನಿಂದ ಕ್ಯಾಥೋಡ್ ಕಡೆಗೆ ಸತುವಿನ ಅಣುಗಳು ಸಂಚರಿಸುತ್ತವೆ. ಈ ಮಾದರಿಯ ಬ್ಯಾಟರಿಗಳಲ್ಲಿ ಝಿಂಕ್ ಬ್ರೊಮೈನ್, ಝಿಂಕ್ ಮ್ಯಾಂಗನೀಸ್ ಡೈಆಕ್ಸೈಡ್, ಝಿಂಕ್ ಏರ್ ಹಾಗೂ ಝಿಂಕ್ ಅಯಾನ್ ಬ್ಯಾಟರಿಗಳೆಂಬ ವಿಧಗಳಿವೆ.
ಬ್ಯಾಟರಿಯಲ್ಲಿ ಶೇಖರಗೊಳ್ಳುವ ಇಂಧನ ನಿಧಾನವಾಗಿ ಕರಗುವುದರಿಂದ ಸೌರಶಕ್ತಿ ಶೇಖರಿಸಿಡಲು ಸತು ಆಧಾರಿತ ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಈ ಮಾದರಿಯ ಬ್ಯಾಟರಿಗಳನ್ನು ನ್ಯೂಯಾರ್ಕ್ ನಗರದ ಕ್ವೀನ್ಸ್‌ನಲ್ಲಿರುವ 32 ಅಂತಸ್ತಿನ ವಸತಿ ಸಮುಚ್ಚಯದಲ್ಲಿ ಸದ್ಯ ಬಳಕೆಯಲ್ಲಿದೆ.
ಇನ್ನೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಶಾರ್ಟ್ ಸರ್ಕೀಟ್ ಸಮಸ್ಯೆ ಇರುವುದರಿಂದ, ಅದನ್ನು ತಪ್ಪಿಸುವ ನಿಟ್ಟಿನಲ್ಲೂ ಸಂಶೋಧನೆಗಳು ಮುಂದುವರಿದಿವೆ.