ನವದೆಹಲಿ: ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ದೆಹಲಿಯ ಯಮುನಾ, ಹಿಮಾಚಲ ಪ್ರದೇಶ ಬಿಯಾಸ್ ನದಿ ಸೇರಿದಂತೆ ಉತ್ತರ ಭಾರತದ ಹಲವು ನದಿಗಳು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿವೆ.
ಈ ನಡುವೆ ದೇಶದ ಹಲವೆಡೆ ಭಾರಿ ಮಳೆ ಕುರಿತಂತೆ ಪ್ರಧಾನಿ ಮೋದಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಪರಿಸ್ಥಿತಿ ನಿರ್ವಹಣೆ ಕುರಿತಂತೆ ಸೂಚನೆ ನೀಡಿದ್ದಾರೆ. ಸ್ಥಳೀಯ ಆಡಳಿತ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಹಿಮಾಚಲ ಪ್ರದೇಶದ ಪ್ರವಾಸಿ ತಾಣ ಮನಾಲಿಯಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆ. ಸತತ ಮೂರನೇ ದಿನವೂ ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವೆಡೆ 300ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ.
ಯುನೆಸ್ಕೊ ಪಾರಂಪರಿಕ ತಾಣ ಶಿಮ್ಲಾ-ಕಲ್ಕಾ ಮಾರ್ಗದ ರೈಲ್ವೆ ಸಂಚಾರ ರದ್ದು ಮಾಡಲಾಗಿದೆ. ಹಳಿಗಳ ಮೇಲೆ ಮಣ್ಣು ಕುಸಿದಿರುವುದರಿಂದ ನಾಳೆವರೆಗೆ ಸಂಚಾರ ಬಂದ್ ಆಗಿದೆ. ಹಿಮಾಚಲ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಜನರು ಹೊರಗಡೆ ಹೋಗುವುದನ್ನು ತಪ್ಪಿಸುವಂತೆ ಸೋಮವಾರ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಸಿಎಂ ಸುಖ್ವಿಂದರ್ ಸಿಂಗ್ ಸುಖು ಮನವಿ ಮಾಡಿದ್ದಾರೆ. ಶಾಸಕರೆಲ್ಲರೂ ತಮ್ಮ ಕ್ಷೇತ್ರಗಳಲ್ಲೇ ಇದ್ದು, ಜನರಿಗೆ ಸ್ಪಂದಿಸುವಂತೆ ಸೂಚಿಸಿದ್ದಾರೆ. ಈ ನಡುವೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ಮಳೆಯಿಂದ ಭೂಕುಸಿತ ಮುಂತಾದ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಸುಖು ಜೊತೆ ಮಾತನಾಡಿದ್ದಾರೆ.
'ಉತ್ತರ ಭಾರತದಲ್ಲಿ ಮಳೆಯಿಂದ ಹಲವರು ಮೃತಪಟ್ಟಿರುವುದು ಅತ್ಯಂತ ದುಃಖಕರ ಮತ್ತು ನೋವಿನ ಸಂಗತಿ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಪ್ರತಿಕೂಲ ಹವಾಗುಣದ ನಡುವೆಯೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ' ಎಂದು ಖರ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.