ಕಾಸರಗೋಡು: ಕೇರಳ ರಾಜ್ಯಾದ್ಯಂತ ರಸ್ತೆ ಅಂಚಿಗೆ ಎಐ ಕ್ಯಾಮರಾ ಅಳವಡಿಸುವ ಮೂಲಕ ದಿನವೊಂದಕ್ಕೆ ಲಕ್ಷಾಂತರ ರೂ.ದಂಡ ಸಂಗ್ರಹಿಸುತ್ತಿರುವ ಮೊಟಾರು ವಾಹನ ಇಲಾಖೆಗೆ ಇತ್ತ ವಿದ್ಯುತ್ ಇಲಾಖೆಯು ಬಿಲ್ ಪಾವತಿಸದ ಕಾರಣ ನೀಡಿ ಕಚೇರಿಯ ವಿದ್ಯುತ್ ಸಂಪರ್ಕವನ್ನೇ ವಿಚ್ಛೇದಿಸಿ ಶಾಕ್ ನೀಡಿದೆ.
ಆರ್‍ಟಿಓ ಎನ್‍ಫೋರ್ಸ್‍ಮೆಂಟ್ ವಿಭಾಗದ ಕಾಸರಗೋಡು ಕಚೇರಿ ಎರಡು ತಿಂಗಳ ವಿದ್ಯುತ್ ಬಿಲ್ ಭರೋಬ್ಬರಿ 23ಸಾವಿರ ರೂ. ಪಾವತಿಸಲು ಬಾಕಿಯಿರಿಸಿಕೊಂಡಿದ್ದು, ಜೂ. 26ಕ್ಕೆ ಕೊನೆ ದಿನಾಂಕವಾಗಿತ್ತು. ನಂತರ ಮೂರು ದಿವಸಗಳ ಕಾಲಾವಕಾಶ ನೀಡಿದರೂ, ಬಿಲ್ ಪಾವತಿಸದಿದ್ದಗ ವಿದ್ಯುತ್ ಇಲಾಖೆ ಸಿಬ್ಬಂದಿ ಆಗಮಿಸಿ ಸಂಪರ್ಕ ವಿಚ್ಛೇದಿಸಿ ತೆರಳಿದ್ದಾರೆ.
ಎಐ ಕ್ಯಾಮರಾ ಮೋನಿಟರಿಂಗ್ ವ್ಯವಸ್ಥೆ ಹೊಂದಿರುವ ಕಚೇರಿ ಇದಾಗಿದ್ದು, ವಿದ್ಯುತ್ ಸಂಪರ್ಕ ವಿಚ್ಛೇದಿಸಿರುವುದರಿಂದ ಎಐ ಕ್ಯಾಮರಾ ಮೋನಿಟರಿಮಗ್, ಕಚೆರಿ ನಿರ್ವಹಣೆಯೂ ಸ್ಥಗಿತಗೊಳ್ಳುವಂತಾಗಿದೆ. ಆದರೆ ಇದು ಎಐ ಕ್ಯಾಮರಾದ ಚಟುವಟಿಕೆಗೆ ಬಾಧಕವಾಗದು. ಸರ್ಕಾರದಿಂದ ಹಣ ಲಭಿಸಲು ಒಂದಷ್ಟು ವಿಳಂಬವಾಗುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ವಿಳಂಬವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆರ್‍ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
ಸೇಡಿನ ಕ್ರಮ...?:
ಕಳೆದ ವಾರ ವಯನಾಡ್ ಜಿಲ್ಲೆಯಲ್ಲಿ ವಿದ್ಯುತ್ ತಂತಿಗೆ ಸಂಪರ್ಕಿಸುವ ಮರದ ರೆಂಬೆ ಕತ್ತರಿಸುವ ನಿಟ್ಟಿನಲ್ಲಿ ಉದ್ದದ ದೋಟಿಯನ್ನು ವಿದ್ಯುತ್ ಇಲಾಖೆಯ ಜೀಪಿಗೆ ಬಿಗಿದು ಸಂಚರಿಸುತ್ತಿರುವ ಮಧ್ಯೆ ಐಎ ಕ್ಯಾಮರಾ ಕಣ್ಣಿಗೆ ಬಿದ್ದು, ಭರೋಬ್ಬರಿ 20ಸಾವಿರ ರೂ. ದಂಡ ವಿಧಿಸಲಾಗಿತ್ತು. ಜತೆಗೆ ಜೀಪಿನ ಚಾಲಕ ಸೀಟ್‍ಬೆಲ್ಟ್ ಧರಿಸದಿರುವುದಕ್ಕೆ 500ರೂ. ದಂಡ ವಿಧಿಸಲಾಗಿತ್ತು. ಇದರ ಬೆನ್ನಿಗೆ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಯನಾಡಿನ ಕಲ್ಪೆಟ್ಟದ ಆರ್‍ಟಿಓ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕೆಎಸ್‍ಇಬಿ ವಿಚ್ಛೇದಿಸಿತ್ತು. ಇದೀಗ ಕಾಸರಗೊಡಿನಲ್ಲಿ ಆರ್‍ಟಿಓ ಕಚೇರಿ ವಿದ್ಯುತ್ ಸಂಪರ್ಕ ವಿಚ್ಛೇದಿಸಿರುವ ಬಗ್ಗೆ ಎರಡೂ ಇಲಾಖೆಗಳ ನಡುವಿನ ಆಂತರಿಕ ಕಚ್ಚಾಟ ಸಾಮಾಜಿಕ ಜಾಲತಣಗಳಲ್ಲಿ ಪರಿಹಾಸ್ಯಕ್ಕೊಳಗಾಗುತ್ತಿದೆ.