ಜಮ್ಮು- ಕಾಶ್ಮೀರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕೀಯವನ್ನು ಮರುಸ್ಥಾಪಿಸಲು ಯೋಜನೆ ರೂಪಿಸಿದ್ದ ಆರು ಮಂದಿಯಿದ್ದ ಮಾಜಿ ಉಗ್ರರ ಗುಂಪನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸರು ಹೇಳಿದ್ದಾರೆ.
ಶ್ರೀನಗರದ ಹೋಟೆಲ್‌ನಲ್ಲಿ ಜೆಕೆಎಲ್‌ಎಫ್‌ನ ಕೆಲವು ಭಯೋತ್ಪಾದಕರು ಮತ್ತು ಹಿಂದಿನ ಪ್ರತ್ಯೇಕತಾವಾದಿಗಳು ಭೇಟಿಯಾಗುತ್ತಿರುವ ಬಗೆಗಿನ ಖಚಿತ ಮಾಹಿತಿಯ ಆಧಾರದ ಮೇಲೆ ಹುಡುಕಾಟ ನಡೆಸಲಾಗಿತ್ತು.
ಈ ವೇಳೆ ಆರು ಜನರನ್ನು ವಶಕ್ಕೆ ಪಡೆಯಲಾಗಿದ್ದು ಪರಿಶೀಲನೆ ಮತ್ತು ವಿಚಾರಣೆಗಾಗಿ ಕೋಠಿಬಾಗ್ ಪಿಎಸ್‌ಗೆ ಕರೆತರಲಾಗಿದೆ. ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮತ್ತು ಹುರಿಯತ್ ಅನ್ನು ಮರಳಿ ಆರಂಭಿಸಲು ಯೋಜಿಸುತ್ತಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ವಶಕ್ಕೆ ಪಡೆದವರನ್ನು ಬಂಧಿಸಲಾಗಿದೆಯೇ ಅಥವಾ ಪರಿಶೀಲನೆಯ ನಂತರ ಬಿಡಲಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ವಿವರಿಸಲಿಲ್ಲ.