ಕೋಲ್ಕತ್ತ (PTI): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಹರಿಹಾಯ್ದ ಬಿಜೆಪಿ ಸಂಸದ ಶಂತನು ಠಾಕೂರ್, 'ಮಮತಾ ಬ್ಯಾನರ್ಜಿ ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಪತನಗೊಳ್ಳಲಿದೆ' ಎಂದು ಭಾನುವಾರ ಭವಿಷ್ಯ ನುಡಿದಿದ್ದಾರೆ.
ಕೋಲ್ಕತ್ತ (PTI): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಹರಿಹಾಯ್ದ ಬಿಜೆಪಿ ಸಂಸದ ಶಂತನು ಠಾಕೂರ್, 'ಮಮತಾ ಬ್ಯಾನರ್ಜಿ ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಪತನಗೊಳ್ಳಲಿದೆ' ಎಂದು ಭಾನುವಾರ ಭವಿಷ್ಯ ನುಡಿದಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬನಗಾಂವ್‌ನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಟಿಎಂಸಿ ಸರ್ಕಾರ ಐದು ತಿಂಗಳುಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ' ಎಂದಿದ್ದಾರೆ.
ಈಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಟಿಎಂಸಿ ಅಕ್ರಮ ನಡೆಸದಿದ್ದರೆ ಬಿಜೆಪಿ ಇನ್ನಷ್ಟು ಉತ್ತಮ ಸಾಧನೆ ಮಾಡುತ್ತಿತ್ತು ಎಂದೂ ಹೇಳಿದ್ದಾರೆ.
ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸುಕಾಂತ ಮಜುಂದಾರ್, 'ಯಾವಾಗ ಏನು ಬೇಕಾದರೂ ಆಗಬಹುದು. ಕಾದು ನೋಡೋಣ' ಎಂದಿದ್ದಾರೆ.
'ಟಿಎಂಸಿಯ ದುರಾಡಳಿತದ ವಿರುದ್ಧ ಜನರು ದಂಗೆ ಎದ್ದರೂ ಏಳಬಹುದು. ಟಿಎಂಸಿ ಶಾಸಕರು ಮಮತಾ ಅವರಿಗೆ ಬೆಂಬಲ ನೀಡಲು ನಿರಾಕರಿಸಿದರೆ ಆ ಪಕ್ಷವು ಬಣಗಳಾಗಿ ಒಡೆಯಬಹುದು. ಈ ರೀತಿ ಆಗಬಹುದು ಎಂದು ನಾನು ಹೇಳುತ್ತಿಲ್ಲ. ಆಗದೇ ಇರಬಹುದು ಆದರೆ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು' ಎಂದೂ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈಚೆಗೆ ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು 'ಪಶ್ಚಿಮ ಬಂಗಾಳದ ಮುಗ್ಧ ಜನರ ಜೀವಕ್ಕೆ ರಕ್ಷಣೆ ಒದಗಿಸಲು ಏನು ಸಾಧ್ಯವೊ ಅದನ್ನು ಕೇಂದ್ರ ಸರ್ಕಾರ ಮಾಡಲಿದೆ' ಎಂದು ತಿಳಿಸಿದ್ದಾರೆ.