ಇಂಫಾಲ: ಮಣಿಪುರದ ವಿಷ್ಣುಪುರ ಮತ್ತು ಚುರಾಚಂದಪುರ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ನಾಲ್ವರು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.
'ಮೈತೇಯಿ ಪ್ರಾಬಲ್ಯವಿರುವ ವಿಷ್ಣುಪುರ ಜಿಲ್ಲೆಯ ಖೋಯಿಜುಮಾಂತಬಿ ಬೆಟ್ಟ ಪ್ರದೇಶದ ಗ್ರಾಮ ಸ್ವಯಂ ಸೇವಕರ ಮೇಲೆ ಭಾನುವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
'ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ್ದು, ಶಸ್ತ್ರಸಜ್ಜಿತ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲಾಗಿದೆ. ಗುಂಡಿನ ದಾಳಿಯ ನಂತರ ಕೆಲವೊಂದು ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿದೆ' ಎಂದು ಪೊಲೀಸರು ಹೇಳಿದರು.
ದಾಳಿಯಲ್ಲಿ ಮೃತಪಟ್ಟ ಮೂವರು ಮೈತೇಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಹೇಳಿಕೆಯಲ್ಲಿ ಸತ್ತವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕುಕಿ ಪ್ರಾಬಲ್ಯವಿರುವ ಚುರಾಚಂದಪುರ ಜಿಲ್ಲೆಯ ಲಾಂಗ್ಜಾ ಮತ್ತು ಚಿಂಗ್ಲಾಂಗ್‌ಮೇಯ್ ಗ್ರಾಮಗಳಲ್ಲಿ ಇಂದು ಬೆಳಗಿವ ಜಾವ 4 ಗಂಟೆಯ ಹೊತ್ತಿಗೆ ದಾಳಿ ನಡೆದಿದ್ದು, ಡೇವಿಡ್ ಹ್ಮಾರ್ ಎಂಬ ಗ್ರಾಮಸ್ಥ ಹತ್ಯೆಯಾಗಿದ್ದಾನೆ ಎಂದು 'ಕುಕಿ ಬುಡಕಟ್ಟು ಜನಾಂಗದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ' (ಐಟಿಎಲ್‌ಎಫ್) ತಿಳಿಸಿದೆ. ಮೈತೇಯಿ ಬೆಂಬಲಿತ 'ಅರಂಬೈ ತೆಂಗೋಲ್' ಎಂಬ ಗುಂಪು ಈ ದಾಳಿ ನಡೆಸಿದೆ ಎಂದು ಐಟಿಎಲ್‌ಎಫ್ ಆರೋಪಿಸಿದೆ. ಆದರೆ ಪೊಲೀಸರ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ.
ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮಣಿಪುರ ಸರ್ಕಾರ ಎರಡು ಸಮುದಾಯಗಳಿಗೆ ಮನವಿ ಮಾಡಿದೆ.