ಬದಿಯಡ್ಕ: ಬದಿಯಡ್ಕದ ಪ್ರಥಮ ಉದ್ಯಮಿ ಹಾಗೂ ಶತಾಯುಷಿ ಚೇರ್ಕೋಡ್ಳು ಸೀತಾರಾಮ ಭಟ್ಟರನ್ನು ಕೇರಳ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಬದಿಯಡ್ಕ ಗ್ರಾಮಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಜರುಗಿದ ಸಮಾರಂಭÀದಲ್ಲಿ ಘಟಕದ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ , ಬದಿಯಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ಮೊತ್ತ ಮೊದಲಾಗಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ, ಔಷಧಿ ಅಂಗಡಿಗಳನ್ನು ಪ್ರಾರಂಭಿಸಿದ ಸೀತಾರಾಮ ಭಟ್ಟರು ಜನಮಾನಸದಲ್ಲಿ ಸದಾ ನೆಲೆಯಾದವರು. ಓರ್ವ ಮಾದರಿ ಉದ್ಯಮಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪಿಲಿಂಗಲ್ಲು ಕೃಷ್ಣ ಭಟ್ ಮಾತನಾಡಿ, ಅವರ ಸಾಹಸ ಪ್ರವೃತ್ತಿ ಮತ್ತು ಸದ್ಗುಣಗಳು ನಮಗೆ ದಾರಿದೀಪವಾಗಲಿ ಎಂದು ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ಟ, ಪೆರಡಾಲ ಗುತ್ತಿನ ಪಿ.ಜಿ.ಚಂದ್ರಹಾಸ ರೈ, ಬೆಂಗ್ರೋಡು ಜನಾರ್ಧನ ಭಟ್ ಶುಭಾಶಂಸನೆಗೈದರು. ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ವಂದಿಸಿದರು.