ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಮಧೂರು ಮಧುವಾಹಿನಿ ಹೊಳೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದೊಳಗೆ ನೀರು ನುಗ್ಗಿದ್ದು, ಭಕ್ತಾದಿಗಳು ಸೊಂಟದ ವರೆಗಿನ ನೀರಲ್ಲಿ ಸಾಗಿ ಶ್ರೀದೇವರ ದರ್ಶನ ಪಡೆದುಕೊಂಡರು.
ಪನಯಾಲ್ ನಿವಾಸಿ ರತ್ನಾಕರ ಎಂಬವರ ಮನೆ ಬಿರುಸಿನ ಗಾಳಿಗೆ ಧರಾಶಾಯಿಯಾಗಿದೆ. ತಚ್ಚಂಗಾಡ್ ನಿವಾಸಿ ಗೋಪಾಲನ್ ಅವರ ಮನೆಗೆ ತೆಂಗಿನಮರ ಉರುಳಿ ಹಾನಿಯಗಿದ್ದು, ಇವರ ಪತ್ನಿ ಪ್ರಮಿಳಾ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದರೆ. ಚಿತ್ತಾರಿ, ಪಳ್ಳಿಕೆರೆ, ತೃಕ್ಕನ್ನಾಡ್ ಪ್ರದೇಶದಲ್ಲಿ ಸಮುದ್ರಕೊರೆತದಿಂದ ಎರಡು ಮನೆಗಳು ನೀರುಪಾಲಾಗಿದೆ. ಬದಿಯಡ್ಕ ಸನಿಹದ ನೆಕ್ರಾಜೆ ಪಟಟಕಯಂ ನಿವಾಸಿ ಅಬ್ದುಲ್ಲ ಅವರ ಮನೆಗೆ ಧರೆ ಕುಸಿದು ಹಾನಿಯುಂಟಾಘಿದೆ. ಮನೆಯಲ್ಲಿದ್ದವರು ಪವಾಡಸದೃಸ ರೀತಿಯಲ್ಲಿ ಪಾರಾಗಿದ್ದಾರೆ.
ವೀರಮಲಕುನ್ನು ಭೂಕುಸಿತ:
ಚೆರುವತ್ತೂರು ವೀರಮಲಕುನ್ನುವಿನಲ್ಲಿ ಭಾರಿ ಭೂಕುಸಿತವುಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 5ರ ಸಂಜೆ 6ರಿಂದಜುಲೈ 7ರ ಸಂಜೆ 6ರ ವರೆಗೆ ವಾಹನಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶಾನುಸಾರ ಪ್ರಯಾಣಿಕ ವಾಹನಗಳನ್ನು ಬೇರೆ ಹಾದಿಯಗಿ ಸಂಚರಿಸಲು ಅಧಿಕರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ದ್ವಿಚಕ್ರ ವಾಹನಗಳು,ಕಾರು, ಬಸ್‍ಗಳು, ಶಾಲಾ ಬಸ್‍ಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ ಪ್ರಯಾಣಿಕರ ವಾಹನಗಳನ್ನು ಕೊಟ್ಟಪುರಂ ಸೇತುವೆ ರಸ್ತೆ ಮೂಲಕ ಚೆರುವತ್ತೂರು ಹಾದಿಯಾಗಿ ಬಿಡಲಾಗುತ್ತಿದೆ.