ತಿರುವನಂತಪುರ (PTI): ಕೇರಳದಲ್ಲಿ ನೈರುತ್ಯ ಮುಂಗಾರು ಮಳೆಯ ಪ್ರಭಾವ ಶುಕ್ರವಾರ ತಗ್ಗಿದ್ದರೂ; ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಪತ್ತನಂತಿಟ್ಟ, ಕೋಟಯಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು ಹಾಗೂ ಆಳಪ್ಪುಳ್ಳ ಜಿಲ್ಲೆಯ ಚೆಂಗನ್ನೂರು, ಕಾರ್ತಿಕಪಳ್ಳಿ, ಕುಟ್ಟನಾಡು ತಾಲ್ಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
'ಗುರುವಾರ 112 ನಿರಾಶ್ರಿತರ ಶಿಬಿರ ಆರಂಭಿಸಲಾಗಿದ್ದು, 6,500 ಜನರು ಆಸರೆ ಪಡೆದಿದ್ದರು. ಶುಕ್ರವಾರ ಶಿಬಿರಗಳ ಸಂಖ್ಯೆ 186ಕ್ಕೇರಿದೆ. ಮಳೆಯಿಂದ 41 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದರೆ, 818 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮುನ್ನಾರಿನಲ್ಲಿ ಭೂಕುಸಿತವಾಗಿದೆ. ಉತ್ತರದ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿದಿದೆ' ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ತಿಳಿಸಿದೆ.
ಪೆರಿಂಗಲ್‌ಕೂತ್ತು ಅಣೆಕಟ್ಟೆಯಿಂದ ಚಾಲಕ್ಕುಡಿ ನದಿಗೆ ನೀರು ಬಿಡಲಾಗಿದೆ ಎಂದು ತ್ರಿಶ್ಯೂರ್ ಜಿಲ್ಲಾಡಳಿತ ಹೇಳಿದೆ.
ಸಂಪರ್ಕ ಕಡಿತ
ಪಿಥೋರಗಡ(ಉತ್ತರಾಖಂಡ) (ಪಿಟಿಐ): ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಧೌಲಿ ನದಿಯಲ್ಲಿ ಪ್ರವಾಹ ಬಂದಿದ್ದು, ಧಾರಮಾ ಕಣಿವೆಯಲ್ಲಿನ ಚಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿದ್ದ ಟ್ರಾಲಿ ಕೊಚ್ಚಿಕೊಂಡು ಹೋಗಿದ್ದರಿಂದ ಗ್ರಾಮದಲ್ಲಿ ವಾಸವಿರುವ ನೂರಕ್ಕೂ ಹೆಚ್ಚು ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ.
' ಗ್ರಾಮದ 25ಕ್ಕೂ ಹೆಚ್ಚು ಜನರು ಗಿಡಮೂಲಿಕೆ ಸಂಗ್ರಹಿಸಲು ಹಿಮಾಲಯದ ಎತ್ತರದ ಪ್ರದೇಶಕ್ಕೆ ತೆರಳಿದ್ದು, ಟ್ರಾಲಿ ಕೊಚ್ಚಿ ಹೋಗಿರುವುದರಿಂದ, ಊರಿಗೆ ಮರಳಲಾಗದ ಸ್ಥಿತಿಯಲ್ಲಿದ್ದಾರೆ' ಎಂದು ಗ್ರಾಮಸ್ಥ ದಿನೇಶ್ ಚಲಾಲ್ ತಿಳಿಸಿದ್ದಾರೆ.
ಚಾವಣಿ ಕುಸಿದು ಸಾವು
ಶಿಮ್ಲಾ/ಉನಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸಿರಮೌರ್ ಜಿಲ್ಲೆಯಲ್ಲಿ ಗುರುದ್ವಾರವೊಂದರ ಮೇಲ್ಚಾವಣಿ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಉನಾದ ಗ್ರಾಮವೊಂದರಲ್ಲಿನ ಸ್ಮಶಾನದಲ್ಲಿ ಸಿಲುಕಿದ್ದ 130 ಜನರನ್ನು ರಕ್ಷಿಸಲಾಗಿದೆ.
ರಾಜ್ಯದಲ್ಲಿ ಗುರುವಾರ ಸಂಜೆವರೆಗೆ 59 ರಸ್ತೆಗಳನ್ನು ಮುಚ್ಚಲಾಗಿದೆ. ಇದುವರೆಗೂ ಮುಂಗಾರು ಮಳೆಯಿಂದ ₹320 ಕೋಟಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.