ಗುವಾಹಟಿ: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೊವೊಂದು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಹೀಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

'ದೇಶೀಯ ಬುಡಕಟ್ಟು ನಾಯಕರ ವೇದಿಕೆ' (ಐಟಿಎಲ್‌ಎಫ್) ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ಮುನ್ನಾದಿನವೇ ವಿಡಿಯೊ ಬಿಡುಗಡೆ ಮಾಡಲಾಗಿದೆ. ಇಬ್ಬರು ಮಹಿಳೆಯರನ್ನು ಭತ್ತದ ಗದ್ದೆಗೆ ಕರೆದೊಯ್ಯುವ ದುಷ್ಕರ್ಮಿಗಳ ಗುಂಪು ಅವರನ್ನು ಹಿಂಸಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮಹಿಳೆಯರು ಸಹಾಯಕ್ಕಾಗಿ ಅಂಗಲಾಚುವುದು ದಾಖಲಾಗಿದೆ.
ಘಟನೆಯನ್ನು ದೃಢೀಕರಿಸಿರುವ ಪೊಲೀಸರು ಬುಧವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದ್ದು, ದುಷ್ಕರ್ಮಿಗಳ ಬಂಧನಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
'ಸಂತ್ರಸ್ತ ಮಹಿಳೆಯರು ಕುಕಿ-ಜೋ ಬುಡಕಟ್ಟಿಗೆ ಸೇರಿದವರು. ಇಬ್ಬರೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಗುರುತು ಬಹಿರಂಗವಾಗುವಂಥ ವಿಡಿಯೊವನ್ನು ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಮಹಿಳೆಯರು ಮತ್ತಷ್ಟು ಅಪಮಾನಕ್ಕೆ ಗುರಿಯಾಗಿದ್ದಾರೆ' ಎಂದು ಐಟಿಎಲ್‌ಎಫ್ ತಿಳಿಸಿದೆ.
ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಹಲವಾರು ಸಂಘಟನೆಗಳು, ಪಕ್ಷಗಳು ಇದೊಂದು ಪೈಶಾಚಿಕ ಕೃತ್ಯ ಎಂದು ಟೀಕಿಸಿವೆ.
ತ್ರಿಪುರಾದ ಪ್ರಾದೇಶಿಕ ಪಕ್ಷ ತಿಪ್ರಾ ಮೋಥಾದ ಮುಖ್ಯಸ್ಥ ಪ್ರದ್ಯೋತ್ ದೇಬ್ ಬರ್ಮಾ ಕೂಡ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.