ಪಾಕಿಸ್ತಾನ ತಂಡ ಭಾರತಕ್ಕೆ ಏಕದಿನ ವಿಶ್ವಕಪ್ ಆಡಲು ಬರಲಿದೆಯೇ ಅಥವಾ ಇಲ್ಲವೇ ಎಂಬ ಚರ್ಚೆ ಇನ್ನೂ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಭಾಗವಹಿಸುವ ಕುರಿತು ನಿರ್ಧರಿಸಲು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನದ ಕ್ರೀಡಾ ಸಚಿವರು ಭಾರತಕ್ಕೆ ಪಾಕಿಸ್ತಾನ ತಂಡ ಆಗಮನದ ಬಗ್ಗೆ ಷರತ್ತು ಹಾಕಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿದ ಪಾಕ್ ಕ್ರೀಡಾ ಸಚಿವ ಎಹ್ಸಾನ್ ಮಜಾರಿ, ಏಷ್ಯಾ ಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಪಾಕಿಸ್ತಾನವೂ ವಿಶ್ವಕಪ್ ಆಡಲು ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನನ್ನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಭಾರತವು ತನ್ನ ಏಷ್ಯಾ ಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಒತ್ತಾಯಿಸಿದರೆ, ನಾವು ಭಾರತದಲ್ಲಿ ನಮ್ಮ ವಿಶ್ವಕಪ್ ಪಂದ್ಯಗಳಿಗೆ ಅದೇ ಬೇಡಿಕೆ ಇಡುತ್ತೇವೆ ಎಂದು ಮಜಾರಿ ಹೇಳಿದ್ದಾರೆ.
ವಾಸ್ತವವಾಗಿ, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡ ಭಾಗವಹಿಸುವ ಬಗ್ಗೆ ನಿರ್ಧರಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವ ಸಮಯದಲ್ಲಿ ಕ್ರೀಡಾ ಸಚಿವರ ಹೇಳಿಕೆ ಬಂದಿದೆ.
ಷರೀಫ್‌ಗೆ ಶಿಫಾರಸುಗಳನ್ನು ಸಲ್ಲಿಸುವ ಮೊದಲು ಸಮಿತಿಯು ಭಾರತ-ಪಾಕಿಸ್ತಾನ ಸಂಬಂಧಗಳ ಎಲ್ಲಾ ಅಂಶಗಳನ್ನು, ಕ್ರೀಡೆ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇರಿಸುವ ಸರ್ಕಾರದ ನೀತಿ ಮತ್ತು ಆಟಗಾರರು, ಅಧಿಕಾರಿಗಳು, ಅಭಿಮಾನಿಗಳು ಮತ್ತು ಮಾಧ್ಯಮಗಳು ಸೇರಿದಂತೆ ಭಾರತದ ಪರಿಸ್ಥಿತಿಯನ್ನು ಚರ್ಚಿಸಲಾಗುತ್ತದೆ. ಪ್ರಧಾನಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಪೋಷಕರೂ ಆಗಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.