ಕಾಸರಗೋಡು: ತೆಂಗು, ಅಡಿಕೆ ಮತ್ತು ಕೋಕೋವನ್ನು ವೈಜ್ಞಾನಿಕವಾಗಿ ಬೆಳೆಸುವ ಕುರಿತು ಈಶಾನ್ಯ ವಲಯದ ಕೆವಿಕೆ ಅಧಿಕಾರಿಗಳಿಗಾಗಿ ತರಬೇತಿ ಕಾರ್ಯಕ್ರಮ ಕಾಸರಗೋಡು ಸಿಪಿಸಿಆರ್‍ಐ ಸಭಾಂಗಣದಲ್ಲಿ ಆರಂಭಗೊಂಡಿತು. ಐದು ದಿವಸಗಳ ಕಾಲ ನಡೆಯಲಿರುವ ತರಬೇತಿ ಕಾರ್ಯಕ್ರಮವನ್ನು ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ.ಹೆಬ್ಬಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಈಶಾನ್ಯ ಪ್ರದೇಶ ತೋಟದ ಬೆಳೆಗಳಿಗೆ ಸೂಕ್ತವಾದ ಪ್ರದೇಶವಾಗಿದ್ದು, ಭವಿಷ್ಯದ ಭರವಸೆಯಾಗಿದೆ ಮತ್ತು ಈ ಪ್ರದೇಶದಲ್ಲಿ ಉತ್ಪಾದಕತೆಯ ಸಾಧ್ಯತೆ ಬಹಳಷ್ಟು ಹೆಚ್ಚಾಗಿದೆ. ಬದಲಾಗುತ್ತಿರುವ ಹವಾಮಾನವನ್ನು ನಿಭಾಯಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಅಗತ್ಯದ ಬಗ್ಗೆ ಮನವರಿಕೆ ಮಡಿದರು.
ಈ ಸಂದರ್ಭ 2023-24ರ ಕಾರ್ಯಕ್ರಮ ಪರಿಷ್ಕರಣೆ-ಮರುಹೊಂದಿಸುವಿಕೆ-ರೂಪಿಸುವಿಕೆ ಬಗ್ಗೆ ಜುಲೈ 10 ರಿಂದ 14ರ ವರೆಗೆ ನಡೆದ ಇನ್‍ಸ್ಟಿಟ್ಯೂಟ್ ರಿಸರ್ಚ್ ಕೌನ್ಸಿಲ್ ಸಭೆಯ ಸಮಾರೋಪವೂ ಈ ಸಂದರ್ಭ ನಡೆಯಿತು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನವನ್ನು ಕಾಯ್ದುಕೊಳ್ಳಲು ಕೃಷಿ ಉತ್ಪನ್ನಗಳಲಿಗುಣಮಟ್ಟ ಅಳವಡಿಸಿಕೊಳ್ಳುವುದು ಮುಖ್ಯ ಅಂಶವಾಗಿದೆ. ಇದಕ್ಕಾಗಿ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ರೈತರನ್ನು ಒಳಗೊಂಡ ಸಹಯೋಗದ ಕೆಲಸವನ್ನು ಕೈಗೊಳ್ಳಲಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳಲು ಎಫ್‍ಎಸ್‍ಎಸ್‍ಎಐ ಮಾನದಂಡಗಳನ್ನು ಅನುಸರಿಸುವುದು ಅನಿವಾರ್ಯ ಎಂದು ತಿಳಿಸಿದರು. ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಡಾ.ಹನುಮಂತೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬೆಳೆ ಸಂರಕ್ಷಣಾ ಮುಖ್ಯಸ್ಥ ಡಾ.ವಿನಾಯಕ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರುಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಮುರಳೀಧರನ್ ಸ್ವಾಗತಿಸಿದರು. ಡಾ.ಮುರಳಿಗೋಪಾಲ್ ವಂದಿಸಿದರು. ಈಶಾನ್ಯ ವಲಯ ಅಧಿಕಾರಿಗಳೊಂದಿಗೆ ಪ್ರಗತಿಪರ ರೈತರು, ರಾಜ್ಯ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಪಿಸಿಆರ್‍ಐ ವಿಜ್ಞಾನಿಗಳು ಭಾಗವಹಿಸಿದ್ದರು. ಶಿಬಿರ ಜುಲೈ 18ರ ವರೆಗೆ ನಡೆಯಲಿದೆ.