ಪೆರ್ಲ: ಶ್ರೀನಾರಾಯಣಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವಿಶೇಷ ಸಭೆ ಪೆರ್ಲ ಶ್ರಿ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಜರುಗಿತು. ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅದ್ದೂರಿಯಾಗಿ ಆಚರಿಸುವುದು, ಸಮಿತಿ ಅಧೀನದಲ್ಲಿ ಮಹಿಳಾ ಘಟಕ ರಚನೆ, ವಿವಿಧ ಘಟಕಗಳ ಸಭೆ ಆಯೋಜಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದ ಅಭಿವೃದ್ಧಿ, ಸಾಮಾಜಿಕ ಉನ್ನತಿಗೆ ಪೂರಕವಾಗಲಿದೆ. ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಕಾರ್ಯಾಚರಿಸಬೇಕು. ವಿವಿಧ ಯೂನಿಟ್‍ಗಳ ಸಭೆ ಆಯೋಜಿಸುವುದರ ಜತೆಗೆ ಸಮುದಾಯದ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವುದು, ಸಂಘಟನೆ ವತಿಯಿಂದ ವಿವಿಧ ತರಬೇತಿ ಕಾರ್ಯಕ್ರಮ ಆಯೋಜಿಸಲು ಸಂಘಟನೆ ಯೋಜನೆಯಿರಿಸಿಕೊಂಡಿರುವುದಾಗಿ ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ಸಂಕಪ್ಪ ಸುವರ್ಣ ಬಾಡೂರು ಮುಖ್ಯ ಭಾಷಣ ಮಾಡಿ, ಶ್ರೀನಾರಾಯಣಗುರುಗಳ ಆದರ್ಶ ಪಾಲನೆಯೊಂದಿಗೆ ಸಂಘಟನೆಯನ್ನು ಬಲಪಡಿಸಿ ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿಸಲು ಸಮಿತಿ ಪಣತೊಡಬೇಕಾಗಿದೆ. ಸಂಘಟನೆಯ ಮೂಲಕ ನಡೆಸುವ ಚಟುವಟಿಕೆಗಳು ಸಮುದಾಯದ ತಳಮಟ್ಟದ ಜನತೆಗೂ ತಲುಪುವಂತಾಗಬೇಕು ಎಂದು ತಿಳಿಸಿದರು. ಅಖಿಲೇಶ್ ಕಾನ, ಸದಾನಂದ ಪೂಜಾರಿ ಬೈರಡ್ಕ, ಬಾಬು ಪೂಜಾರಿ ಕಾನ, ಪದ್ಮನಾಭ ಸುವರ್ಣ, ಕೃಷ್ಣಪ್ಪ ಮಾಸ್ಟರ್ ನಡುಬೈಲು, ನಾರಾಯಣ ಪೂಜಾರಿ ಶೇಣಿ, ರಾಜೇಶ್ ಸುವರ್ಣ ಬಜಕೂಡ್ಲು, ಡಾ. ಕೃಷ್ಣಮೋಹನ, ಲಕ್ಷ್ಮೀ ಸೇರಾಜೆ, ಸರೋಜ ಕಾನ, ರಾಮಣ್ಣ ಟೈಲರ್, ಮಣಿ ಎಂ.ಆರ್ ಮುಂತಾದವರು ಉಪಸ್ಥಿತರಿದ್ದರು. ನಾರಾಯಣ ಮಾಸ್ಟರ್ ವಂದಿಸಿದರು.
ಈ ಸಂದರ್ಭ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರುಕ್ಮಿಣಿ ಬೆದ್ರಂಪಳ್ಳ ಅಧ್ಯಕ್ಷೆ, ಯಶೋಧ ಕಾನ, ಚಂಪಾವತಿ ಬಜಕೂಡ್ಲು ಉಪಾಧ್ಯಕ್ಷರು, ಸಹನಾ ಪೆರ್ಲ ಪ್ರಧಾನ ಕಾರ್ಯದರ್ಶಿ, ಸುಶ್ಮಿತಾ ಜತೆಕಾರ್ಯದರ್ಶಿ, ಲಕ್ಷ್ಮೀ ಸೇರಾಜೆ ಸಂಚಾಲಕಿ ಹಾಗೂ ಚಿತ್ರಾ, ಸರೋಜಾ ಕಾನ, ರಾಜಶ್ರೀ, ಲೀಲಾವತೀ, ದಿವ್ಯಾ ಮುಂಡಿತ್ತಡ್ಕ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.