ಕಾಸರಗೋಡು: ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಶಿಸ್ತುಕ್ರಮದನ್ವಯ ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ರಮಾ ಅವರಿಗೆ ನೀಡಲಾಗಿದ್ದ ವರ್ಗಾವಣೆಗೆ ಆದೇಶಕ್ಕೆ ರಾಜ್ಯ ಹೈಕೋರ್ಟು ತಡೆಯಾಜ್ಞೆ ನೀಡಿದೆ. ಈ ನಿಟ್ಟಿನಲ್ಲಿ ಡಾ. ರಮಾ ಅವರು ಶನಿವಾರ ಕಾಲೇಜಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲೆಯಾಗಿದ್ದ ಸಂದರ್ಭ ಕುಡಿಯುವ ನೀರಿನ ವಿಚಾರದಲ್ಲಿ ವಿದ್ಯಾರ್ಥಿಗಳು ಇವರ ವಿರುದ್ಧ ತಿರುಗಿ ಬಿದ್ದಿದ್ದರು. ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರ ನಡುವಿನ ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಡಾ. ರಮಾ ರಜೆ ಮೇಲೆ ತೆರಳಿದ್ದರು. ರಜೆ ಕಳೆದು ಕಾಲೇಜಿಗೆ ವಾಪಸಾಗುತ್ತಿದ್ದಂತೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಿಳಿದಿತ್ತು. ಈ ಸಂದರ್ಭ ಇಲಾಖಾ ಮಟ್ಟದಲ್ಲಿ ನಡೆದ ತನಿಖೆಯನ್ವಯ ಡಾ. ರಮಾ ಅವರನ್ನು ಕೋಯಿಕ್ಕೋಡಿಗೆ ವರ್ಗಾಯಿಸಲಾಗಿತ್ತು. ಇದನ್ನು ಡಾ. ರಮಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇಲಾಖೆ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದೆ.
ಡಾ. ರಮಾ ಕಾಲೇಜಿಗೆ ಆಗಮಿಸುವ ಸೂಚನೆ ಲಭಿಸಿ ವಿದ್ಯಾರ್ಥಿ ಸಂಘಟನೆಗಳು ಮತ್ತೆ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.