ನವದೆಹಲಿ: 'ರೈತರ ಮಾತನ್ನು ಸೂಕ್ಷ್ಮವಾಗಿ ಆಲಿಸಿ, ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಂಡರೆ ದೇಶದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ರೈತರು ಈ ದೇಶದ ಶಕ್ತಿಯಾಗಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸುಮಾರು 12 ನಿಮಿಷಗಳ ಯೂಟ್ಯೂಬ್ ವಿಡಿಯೊದಲ್ಲಿ, ಅವರು ರೈತರು ಮತ್ತು ಅವರ ಕುಟುಂಬಗಳೊಂದಿಗೆ ಸಂಭಾಷಣೆ ನಡೆಸುವುದು, ಹೊಲಗಳಲ್ಲಿ ಉಳುಮೆ ಮಾಡುವುದು, ಭತ್ತದ ನಾಟಿ ಮಾಡುವುದು ಹಾಗೂ ಅವರೊಂದಿಗೆ ಕುಳಿತು ಆಹಾರ ಸೇವಿಸುವ ದೃಶ್ಯ ಕಾಣಬಹುದು.
'ಹರಿಯಾಣದ ಸೋನೆಪತ್‌ಗೆ ಭೇಟಿ ನೀಡಿದ ವೇಳೆ ಸಂಜಯ್ ಮಲಿಕ್ ಮತ್ತು ತಸ್ಬೀರ್ ಕುಮಾರ್ ಎಂಬ ಹೆಸರಿನ ಇಬ್ಬರು ರೈತರನ್ನು ಭೇಟಿಯಾಗಿದ್ದೆ. ಅವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಒಟ್ಟಿಗೆ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಅವರೆಲ್ಲರ ಜೊತೆ ಸೇರಿ ಹೊಲದಲ್ಲಿ ಕೆಲಸ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
'ಈ ವೇಳೆ ಭತ್ತ ಬಿತ್ತಿದೆವು, ಟ್ರಾಕ್ಟರ್ ಓಡಿಸುವುದರ ಜೊತೆಗೆ ಕೃಷಿಗೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ಚರ್ಚಿಸಿದೆವು. ರೈತ ಮಹಿಳೆಯರು ತಮ್ಮ ಕುಟುಂಬದ ಸದಸ್ಯರಂತೆ ನಮ್ಮನ್ನು ಕಂಡರು. ಪ್ರೀತಿ ಗೌರವಗಳನ್ನು ನೀಡುವುದರ ಜೊತೆ ತಾವು ತಯಾರಿಸಿದ ತಿನಿಸನ್ನು ನೀಡಿದರು' ಎಂದು ಹೇಳಿದರು
'ಭಾರತದ ರೈತರು ಪ್ರಾಮಾಣಿಕರು ಮತ್ತು ಸಂವೇದನಾಶೀಲ ಗುಣವುಳ್ಳವರು. ಅವರಿಗೆ ತಮ್ಮ ಶ್ರಮದ ಬಗ್ಗೆ ತಿಳುವಳಿಕೆ ಇದೆ. ಅಗತ್ಯವಿದ್ದಾಗ, ರೈತ ವಿರೋಧಿ ಕಾನೂನುಗಳ ವಿರುದ್ಧ ದೃಢವಾಗಿ ನಿಲ್ಲುತ್ತಾರೆ. ಎಂಎಸ್‌ಪಿ ಮತ್ತು ವಿಮೆಗೆ ಸೂಕ್ತ ಬೇಡಿಕೆಗಳನ್ನು ಮುಂದಿಡುತ್ತಾರೆ. ನಾವು ಅವರ ಮಾತನ್ನು ಸರಿಯಾಗಿ ಕೇಳಿಸಿಕೊಂಡು, ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡರೆ ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು' ಎಂದರು.
'ಭಾರತವನ್ನು ಒಗ್ಗೂಡಿಸುವಲ್ಲಿ ರೈತರ ಕೊಡುಗೆ ದೊಡ್ಡದಿದೆ. ಅವರು ಉತ್ಪಾದಿಸುವ ಧಾನ್ಯಗಳು ದೇಶದ ಪ್ರತಿಯೊಂದು ತಟ್ಟೆಯ ಭಾಗವಾಗಿದೆ. ಅವರ ತಪಸ್ಸಿಗೆ ಅರ್ಹವಾದ ಗೌರವ ಸಿಗುತ್ತಿಲ್ಲ' ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಇತ್ತೀಚೆಗೆ ಹರ್ಯಾಣಕ್ಕೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಅಲ್ಲಿನ ರೈತರೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿದ್ದರು. ರಾಹುಲ್ ಗಾಂಧಿಯವರು ನಾಟಿ ಮಾಡುವ, ಟ್ರಾಕ್ಟರ್ ಓಡಿಸುವ ಪೋಟೊಗಳು ಎಲ್ಲೆಡೆ ಹರಿದಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿತ್ತು.
ರೈತರು-ಕೃಷಿ ಕಾರ್ಮಿಕರ ಭೇಟಿ
ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ರೈತರು ಮತ್ತು ಕೃಷಿ ಕಾರ್ಮಿಕರನ್ನು ಭೇಟಿಯಾಗಿ, ಸಾಕಷ್ಟು ಸಮಯ ಕಳೆದು, ಸಮಸ್ಯೆಗಳನ್ನು ಆಲಿಸಿದರು. ಅವರ ಹೋರಾಟಗಳು, ಸಮಸ್ಯೆಗಳು ಮತ್ತು ಕುಂದುಕೊರತೆ ಕುರಿತು ಚರ್ಚಿಸಿದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
'ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಬಯಸುತ್ತಾರೆ. ಆದರೆ, ಸರ್ಕಾರದಿಂದ ಯಾವುದೇ ಸಹಾಯ ಬರುತ್ತಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.