ಕುಂಬಳೆ: ಬಸ್ ಚಾಲಕನಿಗೆ ಚೂರಿ ಇರಿತ ಘಟನೆಯ ಹಿಂದಿನ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂತ್ರಸ್ತ ಹಾಗೂ ಕುಟುಂಬದವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜೂನ್ 20 ರಂದು ರಾತ್ರಿ 8:30 ರ ಸುಮಾರಿಗೆ ಕೆಲಸ ಮುಗಿಸಿ ಬೈಕ್ ನಲ್ಲಿ ಕಯ್ಯಾರ್ ನ ಮುರಾದ್ ವಿಲ್ಲಾದ ತನ್ನ ವಸತಿಗೆ ತೆರಳುತ್ತಿದ್ದ ರಶೀದ್(33) ಎಂಬರನ್ನು ಚಂದ್ರನ್ ಅಲಿಯಾಸ್ ಚಂದು ಕಯ್ಯಾರ್ ಬೈಕ್ ನಿಲ್ಲಿಸಿ ಜೊತೆಗೆ ಕರೆದೊಯ್ಯಲು ತಿಳಿಸಿದ್ದು ಅದರಂತೆ ರಶೀದ್ ಅವರನ್ನು ಕರೆದೊಯ್ಯುತ್ತಿದ್ದಾಗ ಚಂದ್ರಹಾಸ ಅಲಿಯಾಸ್ ವಿಷ್ಣು ಎಂಬವರು ಮಧ್ಯೆ ನಿಲ್ಲಿಸಿ ಆತನನ್ನು ಕೊಲ್ಲಲು ಯತ್ನಿಸಿರುವ ಘಟನೆ ನಡೆದಿತ್ತು. ಘಟನೆಯ ನಂತರ ವಿಷ್ಣು ನೇರವಾಗಿ ಪೋಲೀಸರಿಗೆ ಹಾಜರಾಗಿ ಬಂಧನಕ್ಕೊಳಗಾದ್ದನ್ನು ಬಿಟ್ಟರೆ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಲಾಗಿದೆ.
ಮನೆ ಬಳಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಹತ್ಯೆ ಯತ್ನ ನಡೆದಿದೆ. ಮುಖ ಮತ್ತು ಭುಜಕ್ಕೆ ಮಾರಣಾಂತಿಕ ಗಾಯಗಳಾಗಿರುವ ರಶೀದ್ ಎರಡು ವಾರ À ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವರು. ಸುಮಾರು ಎಂಟು ಲಕ್ಷ ರೂಪಾಯಿ ಚಿಕಿತ್ಸೆಗೆ ಖರ್ಚಾಗಿದೆ ಎಂದು ರಶೀದ್ ತಿಳಿಸಿದರು.
ಬಂಧನಕ್ಕೊಳಗಾಗಿರುವ ಶಂಕಿತರನ್ನು ಒಳಗೊಂಡ ತಂಡವು ಅದೇ ಸ್ಥಳದಲ್ಲಿ ಇನ್ನೂ ಮುಚ್ಚುಮರೆಯಿಲ್ಲದೆ ಮದ್ಯ ವ್ಯಾಪಾರವನ್ನು ನಡೆಸುತ್ತಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಶೀದ್ ತಂದೆ ಇಸ್ಮಾಯಿಲ್ ಉಪಸ್ಥಿತರಿದ್ದರು.