ಒಡಿಶಾ: ಒಡಿಶಾ ಕೃಷಿ ತಂತ್ರಜ್ಞಾನ ವಿಶ್ವವಿದ್ಯಾನಿಲಯದ (OUAT), ಆಲ್ ಒಡಿಶಾ ಅಗ್ರೋ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂಘ (AOAPSA) ಬುಧವಾರ ಭುವನೇಶ್ವರದ PMG ಸ್ಕ್ವೇರ್ ಪ್ರದೇಶದಲ್ಲಿ ಉದ್ಯೋಗಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಒಯುಎಟಿಯಿಂದ ಡಿಪ್ಲೊಮಾ ಮುಗಿಸಿರುವ ವಿದ್ಯಾರ್ಥಿಗಳು ತರಕಾರಿ ಮತ್ತು ಕೋಳಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಒಡಿಶಾ ಸರ್ಕಾರ ತಮ್ಮನ್ನು ನಿರ್ಲಕ್ಷಿಸಿದೆ ಮತ್ತು ಅವರಿಗೆ ಉದ್ಯೋಗ ನೀಡಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೃಷಿ, ತೋಟಗಾರಿಕೆ, ಪಶು ವಿಜ್ಞಾನ ಮತ್ತು ಮೀನುಗಾರಿಕೆಯಲ್ಲಿ ಡಿಪ್ಲೊಮಾ ಕೋರ್ಸ್ ಮುಗಿದಿದ್ದರೂ ನಮಗೆ ಯಾವುದೇ ಕೆಲಸವಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಆಕ್ರೋಶಗೊಂಡ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಉದ್ಯೋಗಾವಕಾಶಗಳಿಗೆ ಮೆರಿಟ್ ಆಧಾರಿತ ಆಯ್ಕೆಗೆ ಒತ್ತಾಯಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅಶ್ವಿನಿ, 'ಪ್ರತಿ ವರ್ಷ ಸುಮಾರು 200 ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗುತ್ತಾರೆ. ಸರ್ಕಾರ ಇದೀಗ ಹೊಸಬರನ್ನು ಆಯ್ಕೆ ಮಾಡಿ 2 ವರ್ಷಗಳ ತರಬೇತಿ ನೀಡುತ್ತಿದೆ.ನಮ್ಮನ್ನು ಬದಿಗೊತ್ತಲಾಗಿದೆ. ನಾವು ನಮಗೆ ವಿವಿಧ ವಿಭಾಗಗಳಲ್ಲಿ ಮೀಸಲಾತಿಯನ್ನು ಕೋರುತ್ತೇವೆ' ಎಂದಿದ್ದಾರೆ.