ಗುವಾಹಟಿ: ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಮತ್ತು ಇಂಟರ್‌ನೆಟ್ ಸೇವೆ ಪುನರಾರಂಭಗೊಳ್ಳಬೇಕು ಎಂದು ಆಗ್ರಹಿಸಿ ಇಂಫಾಲ್‌ನಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಹೋರಾಟ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಬೇಕಾಯಿತು.
ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸದಸ್ಯರು ವಿಶ್ವವಿದ್ಯಾಲಯದ ದ್ವಾರದಿಂದ ಇಂಫಾಲ್‌ನ ಸಿಂಗ್ಜಮೈ ಬಜಾರ್ ವರೆಗೆ ಪ್ರತಿಭಟನಾ ಮೆರೆವಣಿಗೆ ಕೈಗೊಂಡರು.
ಶಿಕ್ಷಣದ ದೃಷ್ಟಿಯಿಂದ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಪುನರ್‌ಸ್ಥಾಪನೆಯಾಗಬೇಕು ಎಂಬ ಒಕ್ಕಣೆಯುಳ್ಳ ಫಲಕಗಳನ್ನು ಹಿಡಿದು ಬೀದಿಗಿಳಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿದ್ಯಾರ್ಥಿಗಳನ್ನು ತಡೆಯಲು ಪೊಲೀಸರು ಯತ್ನಿಸಿದಾಗ ವಾಗ್ವಾದ ನಡೆಯಿತು. ಆದರೂ ವಿದ್ಯಾರ್ಥಿಗಳು ಮೆರವಣಿಗೆ ಕೈಬಿಡಲಿಲ್ಲ.
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷ ಅಂತ್ಯಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ರಾಜ್ಯದಲ್ಲಿ ಶಿಕ್ಷಣಕ್ಕೆ ತೊಂದರೆ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಂತರ್‌ಜಾಲ ಸೇವೆಗೆ ನಿರ್ಬಂಧ ವಿಧಿಸಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಅಂತರ್‌ಜಾಲ ಸೇವೆ ಪುನರ್‌ಸ್ಥಾಪನೆಯಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಯನ್ನು ವಿದ್ಯಾರ್ಥಿಗಳು ಕೈಬಿಡದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ ಅವರನ್ನು ಚದುರಿಸಿದರು.
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟ ಹಿನ್ನೆಲೆಯಲ್ಲಿ ಮೇ 3ರಂದು ರಾಜ್ಯದಲ್ಲಿ ಅಂತರ್‌ಜಾಲ ಸೇವೆ ನಿರ್ಬಂಧಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ನಿರ್ಬಂಧವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ವದಂತಿ, ಸುಳ್ಳು ಮಾಹಿತಿ ಹರಡುವುದನ್ನು ತಡೆಯುವ ಸಲುವಾಗಿ ಅಂತರ್‌ಜಾಲ ಸೇವೆ ಸ್ಥಗಿತಗೊಳಿಸಿರುವುದಾಗಿ ಸರ್ಕಾರ ಹೇಳಿದೆ.
ಸುಳ್ಳು ಮಾಹಿತಿ ಹರಡುವುದರ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ಭಾಗಶಃ ಮರುಸ್ಥಾಪಿಸುವಂತೆ ಮಣಿಪುರ ಹೈಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಸಚಿವ ಸಿಂಗ್ ಮನೆ ಮುಂದೆ ಮಹಿಳೆಯರ ಪ್ರತಿಭಟನೆ
ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಆರ್.ಕೆ ರಂಜನ್ ಸಿಂಗ್ ಅವರ ನಿವಾಸದ ಎದುರು ಮೈತೇಯಿ ಸಮುದಾಯದ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಮೈತೇಯಿ ಮತ್ತು ಕುಕಿ ಸಮುದಾಯಗಳು ಎತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು, ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯಲು ಸಚಿವ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.