ಮುಳ್ಳೇರಿಯ : ಅಡೂರು ಗ್ರಾಮದ ಕೊರತಿಮೂಲೆಯ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆ-2023ರ ಫಲಿತಾಂಶ ಪ್ರಕಟಗೊಂಡಿದೆ. ಈ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಮಂಗಳೂರಿನ ಬಿ ಸತ್ಯವತಿ ಭಟ್ ಕೊಳಚಪ್ಪು ಅವರು ಬರೆದ 'ಗೀತಾಮೃತ ಸಾರ' ಕವನವು ಪಡೆದುಕೊಂಡಿದೆ. ದ್ವಿತೀಯ ಬಹುಮಾನವನ್ನು ಸ್ನೇಹಲತಾ ದಿವಾಕರ್ ಕುಂಬ್ಳೆ ಅವರ 'ಈ ಕ್ಷಣವೂ ಸರಿದುಹೋಯಿತು' ಎಂಬ ಕವನ ಹಾಗೂ ತೃತೀಯ ಬಹುಮಾನವನ್ನು ಮಂಗಳೂರಿನ ರಾಜೇಂದ್ರ ಕೇದಿಗೆ ಅವರು ಬರೆದ 'ಅಮ್ಮ... ಇನ್ನೂ ಧ್ಯಾನಸ್ಥೆ' ಕವನವು ಪಡೆದುಕೊಂಡಿದೆ.
ಬಿ ಸತ್ಯವತಿ ಭಟ್ ಕೊಳಚಪ್ಪು : ಇವರು ಒಂದು ಕವನ ಸಂಕಲನ ಹಾಗೂ 4 ಮಕ್ಕಳ ಕವನ ಸಂಕಲನವನ್ನು ಬರೆದಿದ್ದಾರೆ. ನಾ. ಡಿಸೋಜಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಹಿರಿಯ ಸಾಹಿತಿ ಎಂಬ ನೆಲೆಯಲ್ಲಿ ವೈದೇಹಿ ಸಾಹಿತ್ಯ ಪುರಸ್ಕಾರ ಇವರಿಗೆ ದೊರೆತಿದೆ. ಕೊಡಗಿನ ಗೌರಮ್ಮ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರು ಬರೆದ ಬರಹಗಳು ಪ್ರಕಟವಾಗಿವೆ. ಈಗ ಪ್ರಚಲಿತದಲ್ಲಿರುವ ಹಾಯ್ಕು, ಟಂಕಾ, ರುಬಾಯಿ ಮೊದಲಾದ ಪ್ರಕಾರಗಳಲ್ಲಿ ಸಾಕಷ್ಟು ಅನುಭವಿ. ಅನೇಕ ಕವಿಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.
ಸ್ನೇಹಲತಾ ದಿವಾಕರ್ ಕುಂಬ್ಳೆ : ಇವರು 'ಆಮೆ' ಮತ್ತು 'ಮಗ್ಗ' ಎಂಬ ಎರಡು ಕಥಾ ಸಂಕಲನಗಳನ್ನು ಬರೆದಿದ್ದಾರೆ. 'ಆಮೆ' ಕಥಾ ಸಂಕಲನಕ್ಕೆ 2022ರ ಸಾಲಿನ ಶಿವಮೊಗ್ಗ ಕರ್ನಾಟಕ ಸಂಘದ ಎಂ ಕೆ ಇಂದಿರಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರಗಳು ದೊರೆತಿವೆ. ಇವರು ಬರೆದ ಕಥೆ ಹಾಗೂ ಕವನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಬೆಳಕು ಕಂಡಿವೆ. ನಾಡಿನೆಲ್ಲೆಡೆ ಅನೇಕ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ರಾಜೇಂದ್ರ ಕೇದಿಗೆ : ಇವರು ಕಲಾವಿದರಾಗಿ, ಕವಿಯಾಗಿ ಪ್ರಸಿದ್ಧರು. ಕನ್ನಡ ಹಾಗೂ ತುಳು ಬರಹಗಾರರು. ಬಹರೈನ್‍ನ ಕಾಂಚನಗಂಗಾ ಪ್ರತಿಷ್ಠಾನ ಸಹಿತ ವಿವಿಧ ಸಂಘಟನೆಗಳು ನಡೆಸಿದ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದಾರೆ. ಕಲಾವಿದರಾಗಿ ರಾಜ್ಯ, ರಾಷ್ಟ್ರ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದ ಕಲಾ ಚಟುಟಿಕೆಯಲ್ಲಿ ಭಾಗವಹಿಸಿದ್ದಾರೆ. ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಕಾವ್ಯಶ್ರೀ ಪ್ರಶಸ್ತಿ ವಿಜೇತರು. ಮಂಗಳೂರಿನಲ್ಲಿ ಎಸ್-ಕ್ಯೂಬ್ ಆರ್ಟ್‍ಗ್ಯಾಲರಿ ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕಲಾ ಚಟುವಟಿಕೆಗಳನ್ನು ನಡೆಸುತ್ತಾರೆ.