ಉಪ್ಪಿಗಿಂತ ರುಚಿ ಬೇರೆಯಿಲ್ಲ ಅನ್ನೋ ಹಾಗೆ. ನಾವು ಸೇವಿಸುವ ಆಹಾರಕ್ಕೆ ಉಪ್ಪು ಹಾಕಿದ್ರೆ ಮಾತ್ರ ಆ ಆಹಾರ ರುಚಿಸೋದಕ್ಕೆ ಸಾಧ್ಯ. ಆದರೆ ಅತಿಯಾಗಿ ಉಪ್ಪಿನಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಇದ್ರಿಂದ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅದ್ರಲ್ಲೂ ಮಕ್ಕಳಿಗೆ ಹೆಚ್ಚು ಉಪ್ಪು ಇರೋ ಆಹಾರ ಪದಾರ್ಥಗಳನ್ನು ನೀಡಲೇಬಾರದು. ಅಷ್ಟಕ್ಕು ಅತಿಯಾಗಿ ಉಪ್ಪಿನಾಂಶವಿರೋ ಆಹಾರ ತಿನ್ನೊದ್ರಿಂದ ಮಕ್ಕಳಿಗೆ ಯಾವ ರೀತಿ ಆರೋಗ್ಯ ಸಮಸ್ಯೆಗಳಾಗುತ್ತೆ ಅನ್ನೋದನ್ನು ತಿಳಿಯೋಣ.1. ಪದೇ ಪದೇ ಬಾಯಾರಿಕೆಯಾಗುತ್ತದೆ
ಮಕ್ಕಳಿಗೆ ಉಪ್ಪಿನಾಂಶವಿರೋ ಆಹಾರವನ್ನು ಹೆಚ್ಚಾಗಿ ಕೊಡುತ್ತಿದ್ದರೆ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗಿ ಅವರು ಪದೇ ಪದೇ ನೀರು ಕುಡಿಯಬೇಕಾಗುತ್ತದೆ. ಅವರ ಗಂಟಲು ಒಣಗಿದಂತಾಗಿ ದಿನ ಪೂರ್ತಿ ನೀರು ಕುಡಿಯುವಂತಾಗುತ್ತದೆ. ಮಕ್ಕಳಿಗೆ ನೀರಿನ ದಾಹ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಕಾಗೋದಿಲ್ಲ.
2. ಮೂತ್ರ ಹಳದಿ ಬಣ್ಣಕ್ಕೆ ತಿರುಗುತ್ತದೆ ಉಪ್ಪಿನಾಂಶ ಹೆಚ್ಚು ಸೇವಿಸೋದ್ರಿಂದ ಮಗುವಿಗೆ ನಿರಂತರವಾಗಿ ಬಾಯಾರಿಕೆಯಾಗುತ್ತದೆ. ಹಾಗೂ ಸಾಕಷ್ಟು ನೀರನ್ನು ಕುಡಿದು ಆಗಾಗ್ಗೆ ಬಾತ್ ರೂಂ ಗೂ ತೆರಳಬೇಕಾಗುತ್ತದೆ. ಅತಿಯಾಗಿ ಉಪ್ಪು ಸೇವಿಸಿರೋದ್ರಿಂದ ಮಕ್ಕಳ ಮೂತ್ರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗೂ ವಾಸನೆ ಬರುತ್ತಿರುತ್ತದೆ. ಈ ರೀತಿ ಇದ್ದರೆ ನಿಮ್ಮ ಮಗುವಿಗೆ ಮೂತ್ರ ಪರೀಕ್ಷೆಯನ್ನು ಮಾಡಿ ಹಾಗೂ ವೈದ್ಯರನ್ನು ಸಂಪರ್ಕಿಸಿ.
3. ದೇಹದ ಭಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ ನಿಮ್ಮ ಮಗು ಹೆಚ್ಚು ಉಪ್ಪನ್ನು ಸೇವಿಸಿದ್ದರೆ ಅವನ ಅಥವಾ ಅವಳ ದೇಹವು ಹೆಚ್ಚುವರಿ ಸೋಡಿಯಂ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇದು ಜೀವಕೋಶಗಳ ಹೊರಗೆ ದೇಹದಲ್ಲಿ ದ್ರವದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೈಗಳು ಮತ್ತು ಪಾದಗಳಲ್ಲಿ ಉಬ್ಬಿದಂತಾಗುತ್ತದೆ. ಈ ರೀತಿ ಆದರೆ ತಕ್ಷಣ ವೈದ್ಯರನ್ನು ಸಂಪರ್ಕಿಸೋದನ್ನು ಮರೀಬೇಡಿ.
4. ಅಧಿಕ ರಕ್ತದೊತ್ತಡದ ಅಪಾಯವಿರುತ್ತದೆ ಉಪ್ಪಿನಲ್ಲಿ ಸಮೃದ್ಧವಾಗಿರುವ ಆಹಾರವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಂದು ಅಧ್ಯಯನದ ಪ್ರಕಾರ 3-18 ವರ್ಷ ವಯಸ್ಸಿನ 7% ಮಕ್ಕಳು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ವರದಿ ಮಾಡಲಾಗಿದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಗಂಭಿರ ಮಟ್ಟವನ್ನು ತಲುಪಿದರೆ ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹಲವಾರು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು.
5. ಎಷ್ಟು ಪ್ರಮಾಣದಲ್ಲಿ ಉಪ್ಪಿನಾಂಶವನ್ನು ಮಕ್ಕಳು ಸೇವನೆ ಮಾಡಬಹುದು?
- 1 ರಿಂದ 3 ವರ್ಷದ ಮಕ್ಕಳು ದಿನಕ್ಕೆ 2 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು
- 4 ರಿಂದ 6 ವರ್ಷದ ಮಕ್ಕಳು ದಿನಕ್ಕೆ 3 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು
- 7 ರಿಂದ 10 ವರ್ಷದ ಮಕ್ಕಳು ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು
- 1 ವರ್ಷ ಮತ್ತು ಮೇಲ್ಪಟ್ಟವರು ದಿನಕ್ಕೆ 6 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು
- 1 ವರ್ಷದೊಳಗಿನ ಶಿಶುಗಳು ದಿನಕ್ಕೆ 1 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕು
6. ಮಗುವಿನ ದೇಹದಲ್ಲಿ ಉಪ್ಪಿನಾಂಶ ಅಧಿಕವಾಗಿದ್ದರೆ ಏನು ಮಾಡ್ಬೇಕು?
ಮೊದಲನೇಯದಾಗಿ ನಿಮ್ಮ ಮಗುವಿನ ಸೋಡಿಯಂ ಸೇವನೆಯನ್ನು ಮಿತಿಗೊಳಿಸಿ. ಮತ್ತು ನಿಮ್ಮ ಮಗುವಿನ ಆಹಾರ ಯೋಜನೆಯನ್ನು ಮರುವಿನ್ಯಾಸಗೊಳಿಸಿ. ದೇಹದಲ್ಲಿರುವ ಸೋಡಿಯಂ ಅನ್ನು ನೈಸರ್ಗಿಕವಾಗಿ ಸಮತೋಲನಗೊಳಿಸುವಂತಹ ಆರೋಗ್ಯಕರ ಆಹಾರ ಮತ್ತು ಹಣ್ಣುಗಳನ್ನು ಅವರಿಗೆ ನೀಡಿ.
ಹೆಚ್ಚುವರಿ ಸೋಡಿಯಂ ಅನ್ನು ಹೊರಹಾಕಲು ಮತ್ತು ಸೋಡಿಯಂ ಮಟ್ಟವನ್ನು ಸಾಮಾನ್ಯಗೊಳಿಸಲು ನಿಮ್ಮ ಮಗುವಿಗೆ ಸಾಕಷ್ಟು ನೀರು ಕುಡಿಯುವಂತೆ ಮಾಡಿ. ಪೊಟ್ಯಾಸಿಯಮ್ ದೇಹದಲ್ಲಿ ಸೋಡಿಯಂ ಅನ್ನು ನಿರ್ವಹಿಸಲು ಸಹಾಯ ಮಾಡುವ ಪರಿಣಾಮಕಾರಿ ಖನಿಜವಾಗಿದೆ. ನಿಮ್ಮ ಮಗುವಿಗೆ ಬಾಳೆಹಣ್ಣುಗಳನ್ನು ತಿನ್ನಿಸಿ. ಪೊಟ್ಯಾಸಿಯಮ್ ಭರಿತ ಆಹಾರಗಳ ಇತರ ಮೂಲಗಳಾದ ಹಸಿರು ತರಕಾರಿ ಬ್ರೊಕೊಲಿ, ಮೊಸರು, ಕಿವಿ, ಇತ್ಯಾದಿಗಳನ್ನು ಸೇವಿಸೋದಕ್ಕೆ ನೀಡಿ.
ನಿಮ್ಮ ಮಗು ದಿನವಿಡೀ ಸಕ್ರಿಯವಾಗಿರುವಂತೆ ನೋಡಿಕೊಳ್ಳಿ. ಅವರಲ್ಲಿ ಜಡತ್ವ ಹೆಚ್ಚಾಗಲು ಅವಕಾಶ ಕೊಡದಿರಿ.