ತಿರುವನಂತಪುರಂ: ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಅತ್ಯಗತ್ಯ ಕಾನೂನು ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ. ಇದನ್ನು ಸ್ವತಃ ಪ್ರಧಾನಿ ನೆಹರೂ ಹೇಳಿದ್ದರು ಎಂದು ತರೂರ್ ಉಲ್ಲೇಖಿಸಿರುವರು.
ಇದು ಅತೀ ಅಗತ್ಯದ ಕಾನೂನು. ಅದು ಯಾರ ವಿರುದ್ದದ ದಮನ ನೀತಿಯೂ ಅಲ್ಲ. ಎಲ್ಲ ಸಮುದಾಯಗಳ ಮುಖಂಡರ ಜತೆ ಚರ್ಚಿಸಿ ಎಲ್ಲ ರಾಜ್ಯಗಳ ಅಭಿಪ್ರಾಯ ತಿಳಿದು ಕಾನೂನು ಜಾರಿಗೊಳಿಸಬೇಕು ಎಂದಿರುವರು.
ಸದ್ಯ ಕರಡು ಮಸೂದೆ ಬಿಡುಗಡೆಯಾಗಿಲ್ಲ. ಹಾಗಾಗಿ ಏಕೀಕೃತ ನಾಗರಿಕ ಸಂಹಿತೆಯಲ್ಲಿ ಏನನ್ನು ಬರೆಯಲಾಗುತ್ತದೆ ಎಂಬುದು ಸದ್ಯಕ್ಕೆ ಅಸ್ಪಷ್ಟವಾಗಿದೆ. ಇದು ಕೇವಲ ಮುಸ್ಲಿಂ ವಿರೋಧಿ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ಅರಣ್ಯವಾಸಿಗಳ ಮೇಲೂ ಪರಿಣಾಮ ಬೀರುತ್ತದೆ. ಕರಡು ಅಧಿಸೂಚನೆ ಯಾವ ವಿಷಯವನ್ನು ಹೇಳುತ್ತದೆ ಎಂಬುದನ್ನು ಗಮನಿಸಿ ಮುಂದಿನ ಕ್ರಮಕ್ಕೆ ಮುಂದಾಗುವುದು ಉಚಿತ ಎಂದಿರುವರು.
ಮಹಿಳೆಯರು ತಮಗೆ ಬೇಕಾದ ಹಕ್ಕು ಪಡೆಯಬೇಕು ಎಂಬ ಅಭಿಪ್ರಾಯವೂ ನನ್ನದು. ಬೇಕಾದರೆ ಕಾನೂನು ತರಬೇಕು. ಎಲ್ಲರೊಂದಿಗೆ ಚರ್ಚಿಸಿದ ನಂತರ ಅದನ್ನು ಅಂಗೀಕರಿಸಬೇಕು. ಪ್ರಸ್ತುತ ಏಕರೂಪ ನಾಗರಿಕ ಸಂಹಿತೆಯಲ್ಲಿ ಏನನ್ನು ಪರಿಗಣಿಸಲಾಗುತ್ತಿದೆ ಎಂಬುದನ್ನು ನೋಡದೆ, ಚರ್ಚಿಸದೆ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ತರೂರ್ ಹೇಳಿದ್ದಾರೆ.