ನವದೆಹಲಿ: ಬ್ಯಾಂಕ್ಗಳು ವಾರಕ್ಕೆ ಐದು ದಿನ ಕಾರ್ಯ ನಿರ್ವಹಿಸಿ ವಾರಾಂತ್ಯದ ಎರಡು ದಿನ ಬಿಡುವ ಪಡೆಯುವ ಸಾಧ್ಯತೆ ಇದೆ. ಈ ಕುರಿತ ಜುಲೈ 28ಕ್ಕೆ ನಡೆಯುವ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮೂಲಗಳು ಹೇಳಿವೆ. ವಾರಕ್ಕೆ ಐದು ದಿನ ಮಾತ್ರ ಬ್ಯಾಂಕ್ ಕಾರ್ಯನಿರ್ವಹಣೆ ಜಾರಿ ಯಾದರೆ, ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 9.45ರಿಂದ ಸಂಜೆ 5.30ರವರೆಗೆ ಬ್ಯಾಂಕ್ಗಳು ಕಾರ್ಯನಿರ್ವಹಿಸಬೇಕಾಗುತ್ತದೆ.
ಹಾಲಿ ಇರುವ ಕೆಲಸದ ಅವಧಿಗಿಂತ 40 ನಿಮಿಷ ಹೆಚ್ಚಾಗಲಿದೆ. ಪ್ರಸ್ತುತ ಬ್ಯಾಂಕ್ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು 4ನೇ ಶನಿವಾರ ಹಾಗೂ ಎಲ್ಲ ಭಾನುವಾರಗಳು ರಜೆ ಇರುತ್ತವೆ. ಇದರೊಟ್ಟಿಗೆ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಹಬ್ಬಹರಿ ದಿನ ರಜೆಗಳು ಇದೆ. ವಾರಾಂತ್ಯದ ಎರಡೂ ದಿನ ರಜೆ ಘೋಷಣೆಯಾದರೆ ಎಲ್ಲ ಶನಿವಾರಗಳೂ ಬ್ಯಾಂಕ್ ಮುಚ್ಚಿರಲಿದೆ.
ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ಕಳೆದ ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ ವಾರಕ್ಕೆ 5 ದಿನ ಕಾರ್ಯನಿರ್ವಹಣೆ ಪ್ರಸ್ತಾವವನ್ನು ಭಾರತೀಯ ಬ್ಯಾಂಕ್ ಅಸೋಷಿಯೇಷನ್ (ಐಬಿಎ) ಮುಂದೆ ಇರಿಸಿತ್ತು. ಈ ವಿಷಯ ಜುಲೈ 28ರ ಸಭೆಯಲ್ಲಿ ಅಂತಿಮವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.