ಕಾಸರಗೋಡು: ಕನ್ನಡ ಹೋರಾಟಕ್ಕೆ ಶಕ್ತಿ ತುಂಬುವಲ್ಲಿ ಕಾಸರಗೋಡಿನ ಪತ್ರಿಕೆಗಳ ಕೊಡುಗೆ ಗಣನೀಯವಾದುದು. ಕನ್ನಡದ ಅಸ್ತಿತ್ವವನ್ನು ಭದ್ರಪಡಿಸಲು ಕನ್ನಡ ಪತ್ರಕರ್ತರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆಂದು ಕವಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹೇಳಿದ್ದಾರೆ.
ಕನ್ನಡ ಪತ್ರಿಕಾ ದಿನಾಚರಣೆಯಂಗವಾಗಿ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ನಡೆದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾಷಾವಾರು ಪ್ರಾಂತ್ಯ ರಚನೆಯಾದಾಗ ಅಚ್ಚಗನ್ನಡ ಪ್ರದೇಶ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಿತು. ಅಂದಿನಿಂದಲೇ ಇಲ್ಲಿ ಕನ್ನಡಿಗರ ಹೋರಾಟ ಪ್ರಾರಂಭಿಸಲಾಯಿತು. ಕನ್ನಡ ಪತ್ರಕರ್ತರು ಮಾತ್ರವಲ್ಲದೆ ಪತ್ರಿಕೆಗಳ ಮಾಲಕರೂ ಆ ಹೋರಾಟದಲ್ಲಿ ಸಕ್ರಿಯರಾದರು. ವರದಿ, ಲೇಖನಗಳ ಮೂಲಕ ಜಾಗೃತಿ ಮೂಡಿಸಿ ಸರ್ವ ಕನ್ನಡಿಗರನ್ನು ಬಡೆದೆಬ್ಬಿಸಿದರು. ಕಾಸರಗೋಡು ಸಮಾಚಾರ, ನಾಡ ಪ್ರೇಮಿ, ಕಾಸರಗೋಡು ಕನ್ನಡ ಕಹಳೆ ಸಹಿತ ಹಲವು ಪತ್ರಿಕೆಗಳು ಕನ್ನಡಿಗರ ಹೋರಾಟಕ್ಕೆ ಸೂರ್ತಿ ನೀಡಿದುವು. ಈಗಲೂ ಪತ್ರಿಕೆಗಳು ಕನ್ನಡದ ಅವಗಣನೆಯ ವಿರುದ್ಧ ಧ್ವನಿಯೆತ್ತುತ್ತಲೇ ಇವೆ ಎಂದು ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹೇಳಿದರು.
ಲೇಖಕಿ, ಕಲಾವಿದೆ, ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಕನ್ನಡ ಪತ್ರಿಕೆಗಳ ಉದಯ ಮತ್ತು ವಿಕಾಸದ ಬಗ್ಗೆ ಮಾತನಾಡಿ, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಯುವಜನ, ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಶೇಷಾಹ್ವಾನಿತರಾಗಿ ಭಾಗವಹಿಸಿದ ಹಿರಿಯ ಸಾಹಿತಿ ವೈ.ಸತ್ಯನಾರಾಯಣ ಅವರು ಪತ್ರಿಕೆ - ಪತ್ರಕರ್ತರು - ಓದುಗರು ವಿಷಯದಲ್ಲಿ ಕೆಲವು ಮಾತುಗಳನ್ನಾಡಿದರು. ಉದ್ಯಮಿ ಶ್ರೀನಿವಾಸ್, ಛಾಯಾಗ್ರಾಹಕ ಗಣೇಶ್ ಕೆ.ಸಿ.ಎನ್. ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕಾರವಲ್ ಪತ್ರಿಕೆಯ ಉಪ ಸಂಪಾದಕ ಬಸ್ತಿಗುಡ್ಡೆ ಶ್ರೀಧರ ಅವರನ್ನು ಗೌರವಿಸಲಾಯಿತು. ಕಾವ್ಯಾ ಕುಶಲ ಗೌರವ ಪತ್ರವನ್ನು ವಾಚಿಸಿದರು. ಪತ್ರಕರ್ತರಾದ ಗಣೇಶ್ ನುಳ್ಳಿಪ್ಪಾಡಿ, ವೀಜಿ ಕಾಸರಗೋಡು, ಪುರುಷೋತ್ತಮ ನಾೈಕ್, ಪ್ರದೀಪ್ ಬೇಕಲ್ ಮೊದಲಾದವರು ಭಾಗವಹಿಸಿದ್ದರು.
ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟಕ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.