ನವದೆಹಲಿ: ದೆಹಲಿಯಲ್ಲಿನ ಸೇವಾ ವಿಚಾರಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದೆಹಲಿಯ ಎಎಪಿ ಸರ್ಕಾರ ಸಲ್ಲಿಸಿರುವ ಮನವಿಯನ್ನು ಜುಲೈ 10 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ತುರ್ತು ವಿಚಾರಣೆಯನ್ನು ಕೋರಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಜುಲೈ 10 ರಂದು ವಿಚಾರಣೆ ನಡೆಸುವುದಾಗಿ ಹೇಳಿ ಮುಂದೂಡಿತು.
'ಇದು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಸಂಪೂರ್ಣ ಪ್ರಶ್ನಿಸುವ ಮನವಿಯಾಗಿದೆ' ಎಂದು ಸಿಂಘ್ವಿ ಹೇಳಿದರು. ಆಗ ಪೀಠ, '‘ಜುಲೈ 10ರ ಸೋಮವಾರದಂದು ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ' ಎಂದಿತು.
ಎಎಪಿ ಸರ್ಕಾರವು ತನ್ನ ಮನವಿಯಲ್ಲಿ, ಇದು ಉನ್ನತ ನ್ಯಾಯಾಲಯ ಮತ್ತು ಸಂವಿಧಾನದ ಮೂಲ ರಚನೆಯನ್ನು 'ಅತಿಕ್ರಮಿಸಲು' ಪ್ರಯತ್ನಿಸುವ ಅಸಂವಿಧಾನಿಕ ಕ್ರಮವಾಗಿದೆ. ಹೀಗಾಗಿ, ಈ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಬೇಕು ಎಂದು ಹೇಳಿದೆ.
ಈ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವುದರ ಜೊತೆಗೆ, ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ದೆಹಲಿ ಸರ್ಕಾರ ಕೋರಿದೆ.
ಕೇಂದ್ರ ಸರ್ಕಾರವು ಮೇ 19 ರಂದು ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ವಂಚಿಸಿದೆ ಎಂದು ದೆಹಲಿ ಸರ್ಕಾರ ದೂರಿದೆ.