ಬದಿಯಡ್ಕ: ಭಕ್ತಿಭಾವಗಳ ಮೂಲಕ ಭಗವದ್ಭಕ್ತರು ನಿರಂತರವಾಗಿ ಇಲ್ಲಿ ಪಾಲ್ಗೊಳ್ಳುತ್ತಿರುವುದು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ವೇಗವನ್ನು ತಂದುಕೊಡಲಿದೆ. ಅತಿಶೀಘ್ರದಲ್ಲಿ ಈ ಕಾರ್ಯವು ಪೂರ್ಣಗೊಳ್ಳಲಿದೆ. ನಾರಾಯಣ ಸ್ಮರಣೆಯಿಂದ ಶ್ರಮದಾನವನ್ನು ಮಾಡುವ ಕಾರ್ಯಕರ್ತರ ಮೂಲಕ ಊರಿನ ಜನರ ಭಕ್ತಿ ಪ್ರಕಟವಾಗಿದೆ. ಸೀಮೆಯ ಎಲ್ಲಾ ಧಾರ್ಮಿಕ ಕ್ಷೇತ್ರಗಳೂ ವೈಭವದಿಂದ ಮೆರೆಯಬೇಕು ಎಂದು ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಹೇಳಿದರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಶಿಲಾಮಯ ಗರ್ಭಗುಡಿ, ತೀರ್ಥಮಂಟಪಕ್ಕೆ ಶಿಲಾನ್ಯಾಸಗೈದು ನಡೆದ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಖ್ಯಾತ ವೈದ್ಯ ನರೇಶ್ ರೈ ದೆಪ್ಪುಣಿಗುತ್ತು ಮಾತನಾಡಿ ದೇವಸ್ಥಾನಗಳು ಧರ್ಮವನ್ನು ತಿಳಿಸುವ ಶಾಲೆಗಳಾಗಬೇಕು. ಮುಂದಿನ ಜನಾಂಗಕ್ಕೆ ನಮ್ಮ ಧಾರ್ಮಿಕ ವಿಚಾರಗಳನ್ನು ಮನದಟ್ಟು ಮಾಡುವ ಕೇಂದ್ರಗಳಾಗಬೇಕು ಎಂದರು.
ಶ್ರೀ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ, ಮಂಜುನಾಥ ಆಳ್ವ, ಉದ್ಯಮಿ ರಾಮ ಭಟ್ ಪತ್ತಡ್ಕ ಪುತ್ತೂರು, ಆಡಳಿತ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಹಿರಿಯರಾದ ಮಾನ ಮಾಸ್ತರ್ ಮಾನ್ಯ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.