ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್ ನಗರದ ಬಳಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದರು.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಗುಜರಾತ್‌ನ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಇದು ಗುಜರಾತ್ ನ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು, 1,405 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
ರಾಜ್‌ಕೋಟ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಹಿರಾಸರ್ ಗ್ರಾಮದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, 1,500 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ.
ಇದು 3,040 ಮೀಟರ್(3.04 ಕಿಮೀ) ಉದ್ದ ಮತ್ತು 45 ಮೀಟರ್ ಅಗಲದ ರನ್‌ವೇಯನ್ನು ಹೊಂದಿದೆ. ಇಲ್ಲಿ ಯಾವುದೇ ನಿರ್ದಿಷ್ಟ ಹಂತದಲ್ಲಿ 14 ವಿಮಾನಗಳನ್ನು ನಿಲುಗಡೆ ಮಾಡಬಹುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.