ಕಾಸರಗೋಡು: ಬಿರುಸಿನ ಮಳೆ ಮುಂದುವರಿಯುತ್ತಿರುವಂತೆ ಶಾಲಾ ಮಕ್ಕಳ ರಕ್ಷಣೆಯ ಬಗ್ಗೆ ಶಾಲಾ ಆಡಳಿತ ಹಾಗೂ ಹೆತ್ತವರಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಹೊಸದುರ್ಗ, ವೆಳ್ಳರಿಕುಂಡು ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ರಜೆಘೋಷಿಸಿ ಆದೇಶ ಹೊರಡಿಸಿದ್ದರೆ, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಎಂದಿನಂತೆ ತರಗತಿ ನಡೆಸಲು ಸೂಚಿಸಲಾಗಿತ್ತು. ಬಹುತೇಕ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಂಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರುತುಂಬಿಕೊಂಡ ಪರಿಣಾಮ ಕೆಲವೆಡೆ ಮಕ್ಕಳಿಗೆ ಶಾಲೆಗೆ ತೆರಳಲು ಹೆಚ್ಚಿನ ಅನಾನುಕೂಲವುಂಟಾಗಿತ್ತು. ಬಿರುಸಿನ ಮಳೆಗೆ ಶಾಲೆಗೆ ರಜೆ ಘೋಷಿಸದಿರುವುದರಿಂದ ಕೆಲವು ಹೆತ್ತವರಲ್ಲಿ ಆತಂಕದ ಜತೆಗೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಬಿರುಸಿನ ಮಳೆಯಾಗುತ್ತಿರುವುದರಿಂದ ಶಾಲೆಗೆ ರಜೆ ಘೋಷಿಸುವ ವಿಚಾರದಲ್ಲಿ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‍ಗಳೂ ಹರಿದಾಡಲಾರಂಭಿಸಿದೆ.
ಶಾಲಾ ವಾಹನಗಳು ಹಾಗೂ ಇತರ ವಾಹನಗಳಲ್ಲಿ ಶಾಲೆಗೆ ತೆರಳುವವರಿಗೆ ಸಮಸ್ಯೆ ಎದುರಾಗದಿದ್ದರೂ, ಕಿಲೋಮೀಟರ್ ವರೆಗೆ ನಡೆದೇ ಶಾಲೆಗೆ ತೆರಳುವ ಮಕ್ಕಳ ಹೆತ್ತವರಿಗೆ ಬಿರುಸಿನ ಮಳೆಯಿಂದ ಆತಂಕ ಎದುರಾಗಿದೆ. ಬಿರುಸಿನ ಮಳೆಯಿದ್ದಲ್ಲಿ, ಮಕ್ಕಳು ಮನೆಯಿಂದ ತೆರಳಿ ಸಂಜೆ ಶಾಲೆಬಿಟ್ಟು ವಾಪಸಾಗುವ ವರೆಗೂ ಮನೆಯವರಿಗೆ ಆತಂಕ ತಪ್ಪುತ್ತಿಲ್ಲ. ಬಿರುಸಿನ ಮಳೆಯಾಗುತ್ತಿದ್ದರೆ, ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಸರ್ಕಾರ ವಹಿಸಿದೆ. ರಜೆ ನೀಡುತ್ತಿದ್ದಲ್ಲಿ ಹಿಂದಿನ ದಿನ ತೀರ್ಮಾನ ಕೈಗೊಂಡು ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಆಯಾದಿನ ರಜೆ ಘೋಷಿಸಿದಲ್ಲಿ, ಬೆಳಗ್ಗಿನ ಹೊತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಮಾಹಿತಿ ಲಭ್ಯವಾಗದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದೂ ಸರ್ಕಾರ ತಿಳಿಸಿದೆ.