ತಿರುವನಂತಪುರಂ: ಬುಧವಾರ ತಮಿಳುನಾಡಿನಲ್ಲಿ ಎನ್‍ಐಎಗೆ ಸಿಕ್ಕಿಬಿದ್ದಿರುವ ಮಲಯಾಳಿ ಭಯೋತ್ಪಾದಕ ಆಶಿಫ್ ಇಸ್ಲಾಮಿಕ್ ಸ್ಟೇಟ್ ಸೇರಲು ಹಣ ಕದ್ದಿರುವುದು ಪತ್ತೆಯಾಗಿದೆ.
ತ್ರಿಶೂರ್ ಮತಿಲಕಂ ಮೂಲದ ಆಶಿಫ್ ನನ್ನು ನಿನ್ನೆ ತಮಿಳುನಾಡಿನಿಂದ ಬಂಧಿಸಲಾಗಿತ್ತು. ಆರೋಪಿಯು ಇತ್ತೀಚೆಗೆ ಕೇರಳದಲ್ಲಿ ದರೋಡೆ ಮತ್ತು ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಎಂದು ಎನ್‍ಐಎ ಮಾಹಿತಿ ನೀಡಿದೆ. ಸದ್ಯ ಆಶಿಫ್ ಒಂದು ವಾರ ಎನ್‍ಐಎ ಕಸ್ಟಡಿಯಲ್ಲಿರಲಿದ್ದಾನೆ.
ಟೆಲಿಗ್ರಾಂನಲ್ಲಿ ಪೆಟ್ ಲವರ್ಸ್ ಎಂಬ ಗುಂಪನ್ನು ರಚಿಸಿಕೊಂಡು ಕಳ್ಳತನಕ್ಕೆ ಗ್ಯಾಂಗ್‍ಗೆ ಜನರನ್ನು ಸೇರಿಸುತ್ತಿದ್ದ. ಪಾಲಕ್ಕಾಡ್‍ನಿಂದ 30 ಲಕ್ಷ ರೂ.ಗಳನ್ನು ಕದ್ದ ನಂತರ ಆಶಿಫ್ ಮತ್ತು ಆತನ ತಂಡ ಸತ್ಯಮಂಗಲಂ ಅರಣ್ಯ ಪ್ರದೇಶದ ಮನೆಯೊಂದರಲ್ಲಿ ತಲೆಮರೆಸಿಕೊಂಡಿತ್ತು. ಈ ಅರಣ್ಯದಿಂದ ಎನ್‍ಐಎ ಆರೋಪಿಯನ್ನು ಹಿಡಿದಿದೆ. ಆಶಿಫ್ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿ. ಅಲ್ಲದೆ, ಪಾಲಕ್ಕಾಡ್ ಎಟಿಎಂನಿಂದ ಹಣ ದೋಚಿರುವ ಘಟನೆಯಲ್ಲೂ ಈತ ಶಾಮೀಲಾಗಿರುವ ಸುಳಿವು ಸಿಕ್ಕಿದೆ. ತಂಡದಲ್ಲಿರುವ ಮತ್ತೊಬ್ಬ ಆರೋಪಿಗಾಗಿ ತನಿಖೆ ಮುಂದುವರಿದಿದೆ. ಕೊಚ್ಚಿ ಎನ್‍ಐಎ ಘಟಕ ಪ್ರಕರಣದ ತನಿಖೆ ನಡೆಸುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕ್, ಸಹಕಾರ ಸಂಘ ಹಾಗೂ ಚಿನ್ನಾಭರಣ ವ್ಯಾಪಾರಿಯನ್ನು ದರೋಡೆ ಮಾಡಲು ಈ ತಂಡ ಯೋಜನೆ ರೂಪಿಸಿತ್ತು.
ಕಳ್ಳತನದ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಇದರ ಉದ್ದೇಶವಾಗಿತ್ತು. 36 ರ ಹರೆಯದ ಆಶಿಫ್ ಕಳೆದ ಮೂರು ತಿಂಗಳಿನಿಂದ ಎನ್‍ಐಎ ಕಣ್ಗಾವಲಿನಲ್ಲಿದ್ದ. ಆರೋಪಿಯು ಸತ್ಯಮಂಗಲಂ ಅರಣ್ಯ ಪ್ರದೇಶದ ಭವಾನಿಸಾಗರ ಪ್ರದೇಶದಲ್ಲಿ ಬಾಡಿಗೆಗೆ ನೆಲೆಸಿದ್ದ. ಆರೋಪಿಗಳು ಎಟಿಎಂ ದರೋಡೆ, ಆನ್‍ಲೈನ್ ಬ್ಯಾಂಕ್ ವಂಚನೆಯಂತಹ ಹಲವು ದರೋಡೆಗಳಿಗೆ ಯೋಜನೆ ರೂಪಿಸಿದ್ದರು. ಈತ ಪಾತೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿ ಎಂದು ವರದಿಯಾಗಿದೆ.