ಮುಳ್ಳೇರಿಯ : ದೇಲಂಪಾಡಿ ಗ್ರಾಮ ಪಂಚಾಯಿತಿ 6ನೇ ವಾರ್ಡ್ ಆಗಿರುವ ಬಳ್ಳಕ್ಕಾನ ಪ್ರದೇಶಕ್ಕೆ ಸಾಗುವ ರಸ್ತೆಯು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸಂಪೂರ್ಣವಾಗಿ ಹಾನಿಗೊಳಗಾಗಿ ಸಂಚಾರ ದುಸ್ತರವಾಗಿದೆ. ಕಳೆದ ಕೆಲ ದಿನಗಳಿಂದ ಸುರಿವ ಭಾರೀ ಮಳೆಯ ನೀರು ನಿರಂತರವಾಗಿ ರಸ್ತೆಯಲ್ಲೇ ಹರಿದ ಕಾರಣ ಡಾಂಬರೀಕರಣವು ಕಿತ್ತು ಹೋಗಿ ರಸ್ತೆಯ ಜಲ್ಲಿ ಕಲ್ಲುಗಳು ಚದುರಿ ಹೋಗುತ್ತಿವೆ. ಇದೀಗ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆಯು ಅತ್ಯಂತ ಕಷ್ಟವಾಗುತ್ತಿದೆ. ವಾಹನಗಳು ಸಾಗುವಾಗ, ಅವುಗಳ ಚಕ್ರಕ್ಕೆ ಸಿಲುಕಿದ ಕಲ್ಲುಗಳು ಸಿಡಿದು ಹಾರುವುದರಿಂದ ನಡೆಯುತ್ತಾ ಸಾಗುವ ಪಾದಾಚಾರಿಗಳಿಗೂ ಸಂಚರಿಸಲು ಕಷ್ಟವಾಗಿದೆ. ಈ ರಸ್ತೆಯು ಬಹಳ ಇಕ್ಕಟ್ಟಾಗಿದ್ದು, ಅಂಕುಡೊಂಕುಗಳಿಂದ ಕೂಡಿದೆ.
ಬಳ್ಳಕ್ಕಾನ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಮನೆಗಳಿದ್ದು, ಪ್ರತೀ ದಿನ ನೂರಾರು ಮಕ್ಕಳು, ಮಹಿಳೆಯರು ಈ ರಸ್ತೆಯಲ್ಲಿ ವ್ಯವಹಾರಕ್ಕಾಗಿ ಸಂಚರಿಸುತ್ತಾರೆ. ಬಳ್ಳಕ್ಕಾನ ರಸ್ತೆಯುದ್ದಕ್ಕೂ ಭಾರೀ ಗಾತ್ರದ ಮರಗಳಿದ್ದು, ಇವುಗಳ ಅಡಿಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅಪಾಯಕಾರಿಯಾಗಿವೆ ಎಂದು ನಿವಾಸಿಗಳು ಹೇಳುತ್ತಾರೆ. ಅಡೂರು ಮಹಾಲಿಂಗೇಶ್ವರ ಕ್ಷೇತ್ರದ ಎದುರಿನಿಂದ ಸಾಗುವ ಈ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.