ನವದೆಹಲಿ : ಉತ್ತರ ಭಾರತದ ಹಲವೆಡೆ ಬುಧವಾರ ಮಳೆ ಅಬ್ಬರ ಕಡಿಮೆಯಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ನಾಲ್ಕು ದಶಕಗಳ ನಂತರ ನದಿಯ ನೀರಿನ ಮಟ್ಟ 207.55 ಮೀಟರ್ ಗಡಿ ದಾಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಪ್ರವಾಹ ಇರುವ ಪ್ರದೇಶಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸುರಕ್ಷಿತ ಜಾಗಗಳಿಗೆ ತೆರಳಬೇಕು ಹಾಗೂ ತಗ್ಗು ಪ್ರದೇಶಗಳ ಮೂಲಕ ಸಂಚರಿಸದಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜನರಿಗೆ ಸಲಹೆ ನೀಡಿದೆ. ವಜಿರಾಬಾದ್‌ನ ಸಿಗ್ನೇಚರ್ ಬ್ರಿಜ್ ಬಳಿಯ ಗಢಿ ಮಾಂಡು ಗ್ರಾಮವು ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಸಾರಿಗೆ ನಿಗಮದ ಕೇಂದ್ರ ಕಚೇರಿ ಆವರಣದಲ್ಲಿ ನೀರು ಮೂರು ಅಡಿಗಳಷ್ಟು ನೀರು ನಿಂತಿತ್ತು. ನೌಕರರು ನೀರಿನಲ್ಲಿ ಸಾಗಿಯೇ ಕಚೇರಿ ಸೇರಿದ್ದಾರೆ.
ರಸ್ತೆಗಳಲ್ಲಿ ನೀರು ನಿಂತಿದ್ದ ಪರಿಣಾಮ ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವಡೆ ರಸ್ತೆಗಳು ಕೊಚ್ಚಿ ಹೋಗಿದ್ದರೆ, ಇನ್ನೂ ಕೆಲವಡೆ ಕನ್ವರ್ ಯಾತ್ರಿಗಳು ಸಾಗಿದ್ದು ಕೂಡ ವಾಹನಗಳ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು.ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕೂಡ ಜನರು ಕಷ್ಟಪಟ್ಟರು.
ಸಚಿವೆ ಆತಿಶಿ ಮಾರ್ಲೆನಾ ಅವರು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಪ್ರವಾಹ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.
ಸಭೆ: ಯಮುನಾ ನದಿ ಪ್ರವಾಹ ಹೆಚ್ಚಳ, ನಗರದ ವಿವಿಧೆಡೆ ನೀರು ನಿಂತು ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಧಿಕಾರಿಗಳ ಸಭೆ ನಡೆಸಿದರು.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹಿಮಾಚಲ ಪ್ರದೇಶದಿಂದ ಹರಿಯಾಣಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದರ ಪರಿಣಾಮ ದೆಹಲಿ ಮೇಲೂ ಆಗಲಿದೆ. ಯಮುನಾ ನದಿಗೆ ಒಳಹರಿವು ಕಡಿಮೆಯಾಗಿ ಪ್ರವಾಹ ಇಳಿಯಲು ಸಮಯ ಹಿಡಿಯಲಿದೆ' ಎಂದರು.
'ಒತ್ತುವರಿ, ಹೂಳು ಕಾರಣ': ನದಿಪಾತ್ರದ ಒತ್ತುವರಿ, ಭಾರಿ ಮಳೆ ಹಾಗೂ ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಹೂಳಿನಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯಲು ಕಾರಣ ಎಂದು ತಜ್ಞರು ಹೇಳಿದ್ದಾರೆ.
'ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‌ನಿಂದ ಬಿಟ್ಟ ನೀರು ಈ ಬಾರಿ ಕಡಿಮೆ ಸಮಯದಲ್ಲಿಯೇ ದೆಹಲಿ ತಲುಪಿದೆ. ಒತ್ತುವರಿ ಹಾಗೂ ಹೂಳು ತುಂಬಿರುವುದೇ ಇದಕ್ಕೆ ಕಾರಣ' ಎಂದು ಕೇಂದ್ರೀಯ ಜಲ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
lಅನಗತ್ಯ ಪ್ರವಾಸ ಕೈಬಿಡುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜನರಿಗೆ ಮನವಿ ಮಾಡಿದ್ದಾರೆ
lಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಮಳೆ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ
lಮಳೆಯಿಂದಾದ ಅವಘಡಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಖಟ್ಟರ್ ಘೋಷಿಸಿದ್ದಾರೆ
lಹಿಮಾಚಲ ಪ್ರದೇಶದ ಉನಾದಲ್ಲಿರುವ ಭಾಕ್ರಾ ಅಣೆಕಟ್ಟೆ ಒಳಹರಿವು ಹೆಚ್ಚಿದ್ದರಿಂದ ಗುರುವಾರ ಹೆಚ್ಚುವರಿಯಾಗಿ 16 ಸಾವಿರ ಕ್ಯುಸೆಕ್ ನಷ್ಟು ನೀರನ್ನು ಸಟ್ಲೆಜ್ ನದಿಗೆ ಬಿಡುವುದಾಗಿ ಜಿಲ್ಲಾಧಿಕಾರಿ ರಾಘವ ಶರ್ಮಾ ಹೇಳಿದ್ದಾರೆ
ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ ಉಕ್ಕಿ ಹರಿಯುತ್ತಿರುವ ಯಮುನಾ ನದಿ ನೋಡಲು, ದಂಡೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಕೆಲವರು ಮುಂದಾಗುತ್ತಿದ್ದು, ಕೂಡಲೇ ಇಂತಹ ದುಸ್ಸಾಹಸ ನಿಲ್ಲಿಸಬೇಕು.