ಇಂಫಾಲ್: ಮಣಿಪುರ ಸರ್ಕಾರ ಸಚಿವರು, ಶಾಸಕರು, ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿಐಪಿ ಭದ್ರತೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿದೆ.
ವಿಐಪಿ ಭದ್ರತೆಗೆ ನಿಯೋಜನೆಗೊಂಡಿದ್ದ 2,000 ಭದ್ರತಾ ಸಿಬ್ಬಂದಿಯನ್ನು ಈಗ ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರ ರಕ್ಷಣೆಗೆ ನಿಯೋಜಿಸಲಾಗುವುದು ಎಂದು ಬುಧವಾರ ಸರ್ಕಾರದ ಮೂಲಗಳು ತಿಳಿಸಿವೆ.
ಕೃಷಿ ಆರಂಭಿಸುವ ರೈತರಿಗೆ ಭದ್ರತೆ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
"ಅನೇಕ ಸಚಿವರು, ಶಾಸಕರು, ಇತರ ರಾಜಕಾರಣಿಗಳು, ಪೌರಕಾರ್ಮಿಕರು, ಮಾಜಿ ಅಧಿಕಾರಿಗಳ ಭದ್ರತೆಯನ್ನು ಕಡಿತಗೊಳಿಸಲಾಗಿದ್ದು, ಸುಮಾರು 2,000 ಭದ್ರತಾ ಸಿಬ್ಬಂದಿಯನ್ನು ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ರೈತರ ರಕ್ಷಣೆಗೆ ನಿಯೋಜಿಸಲಾಗುವುದು" ಎಂದು ಅವರು ಹೇಳಿದ್ದಾರೆ.
"ಕೃಷಿ ಉದ್ದೇಶಕ್ಕಾಗಿ, ಐದು ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಕಾಂಗ್ಪೋಕ್ಪಿ, ಚುರಾಚಂದ್‌ಪುರ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ಸುಮಾರು 2,000 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.