ಅಬುದಾಬಿ: ಫ್ರಾನ್ಸ್ ಪ್ರವಾಸದ ಬಳಿಕ ಗಲ್ಫ್ ರಾಷ್ಟ್ರವಾದ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ರಾಜಧಾನಿ ಅಬುದಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಜೊತೆಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಕುರಿತು ಮಾತುಕತೆ ನಡೆಸಿದರು.
ಅಬುದಾಬಿ: ಫ್ರಾನ್ಸ್ ಪ್ರವಾಸದ ಬಳಿಕ ಗಲ್ಫ್ ರಾಷ್ಟ್ರವಾದ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ರಾಜಧಾನಿ ಅಬುದಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಜೊತೆಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಕುರಿತು ಮಾತುಕತೆ ನಡೆಸಿದರು.
ಕಳೆದ ವರ್ಷ ಭಾರತ-ಯುಎಇ ನಡುವಿನ ಆರ್ಥಿಕ ಒಪ್ಪಂದದಿಂದಾಗಿ ಎರಡೂ ದೇಶಗಳ ನಡುವೆ ಶೇ 20ರಷ್ಟು ವ್ಯಾಪಾರ ವಹಿವಾಟು ವೃದ್ಧಿಸಿದ್ದು, ಈ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು.
ಬಳಿಕ ಹಲವು ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ ಅವರು, 'ಎರಡು ರಾಷ್ಟ್ರಗಳ ಕರೆನ್ಸಿಗಳು ಸದೃಢ ಆರ್ಥಿಕತೆ ವೃದ್ಧಿಗೆ ಪೂರಕವಾಗಿದ್ದು, ನಮ್ಮ ನಡುವೆ ಮತ್ತಷ್ಟು ವಿಶ್ವಾಸ ವೃದ್ಧಿಗೆ ನಾಂದಿ ಹಾಡಿವೆ' ಎಂದು ಹೇಳಿದ್ದಾರೆ.
'ಉಭಯ ದೇಶಗಳ ನಡುವಣ ಪರಸ್ಪರ ಸಹಕಾರ ಮತ್ತು ನೆರವಿಗೆ ಈ ಒಪ್ಪಂದ ಸಹಕಾರಿಯಾಗಲಿದೆ' ಎಂದು ಯುಎಇ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಮೋದಿ ಅವರಿಗೆ ಅಧ್ಯಕ್ಷರ ಅರಮನೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ತ್ರಿವರ್ಣ ಧ್ವಜ ಹಿಡಿದು ಹಾಜರಿದ್ದ ಮಕ್ಕಳು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಎರಡೂ ದೇಶಗಳು ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು, ರಕ್ಷಣೆ, ಭದ್ರತೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿವೆ.
ಸಮ್ಮೇಳನಕ್ಕೆ ಸಹಕಾರ: ನವೆಂಬರ್ 28ರಿಂದ ಡಿಸೆಂಬರ್ 12ರವರೆಗೆ ದುಬೈನ ಎಕ್ಸೋ ಸಿಟಿಯಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ (ಸಿಒಪಿ28) ನಡೆಯಲಿದೆ. ಇದರ ನೇತೃತ್ವವನ್ನು ಯುಎಇ ಹೊತ್ತಿದ್ದು, ಸಮ್ಮೇಳನದ ಯಶಸ್ಸಿಗೆ ಭಾರತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಶಾಖಾಹಾರ ಸವಿದ ಮೋದಿ
ಯುಎಇ ಸಾಂಸ್ಕೃತಿಕ ಹೆಗ್ಗುರುತಾದ ಅಧ್ಯಕ್ಷರ ಅರಮನೆ ಕಸ್ರ್-ಅಲ್-ವತನ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಶಾಖಾಹಾರದ ಔತಣಕೂಟ ಏರ್ಪಡಿಸಲಾಗಿತ್ತು.
ಕಪ್ಪು ಮಸೂರ್ ದಾಲ್, ಗೋಧಿಯಿಂದ ತಯಾರಿಸಿದ ಖಾದ್ಯ, ಹೂಕೋಸು ಮತ್ತು ಕ್ಯಾರೆಟ್ ತಂದೂರಿ ಆಹಾರದ ಪಟ್ಟಿಯಲ್ಲಿದ್ದವು. ಸ್ಥಳೀಯ ಋತುಮಾನಕ್ಕೆ ಅನುಗುಣವಾಗಿ ಲಭಿಸುವ ಹಣ್ಣುಗಳು ಭೋಜನದ ಸವಿ ಹೆಚ್ಚಿಸಿದ್ದವು.