ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ (ಎನ್ ಹೆಚ್ 7ನ್ನು) ಲಂಬಗಡ ಮತ್ತು ಖಚಡಾ ಡ್ರೈನ್‌ಗಳಲ್ಲಿ ಕಳೆದ 13 ಗಂಟೆಗಳಿಂದ ಮುಚ್ಚಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಸಾರ್ವಜನಿಕರ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೆದ್ದಾರಿ ಬಂದ್ ಮಾಡಲಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಯಾಣಿಕರು ಆದಷ್ಟು ಬೇಗ ತೆರಳಲು ಅನುಕೂಲವಾಗುವಂತೆ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಹಿಂದೆ ಭೂಕುಸಿತದಿಂದಾಗಿ ಚಮೋಲಿ ಜಿಲ್ಲೆಯ ಚಿಂಕಾದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿತ್ತು. ಬದರಿನಾಥ ದೇಗುಲಕ್ಕೆ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಸೇರಿದಂತೆ ಅನೇಕ ಪ್ರಯಾಣಿಕರು ದಾರಿ ಮಧ್ಯ ಸಿಲುಕಿಕೊಂಡಿದ್ದರು.
ಉತ್ತರಾಖಂಡದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಉಂಟಾದ್ದರಿಂದ ಮತ್ತೆ ಹೆದ್ದಾರಿಯ 100 ಮೀಟರ್ ಭಾಗವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳಲ್ಲಿ ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್‌ಗೆ ತೆರಳುತ್ತಿದ್ದವರೂ ಸೇರಿದ್ದಾರೆ.
ಗೌಚಾರ್, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ಚಮೋಲಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳು ಮತ್ತು ಬದರಿನಾಥ್, ಜೋಶಿಮಠಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವಾಹನಗಳು ಸಿಲುಕಿದ್ದು, ಪಿಪಾಲ್ಕೋಟಿಯಲ್ಲಿ ಮಾರ್ಗವನ್ನು ಸುಗಮಗೊಳಿಸಲು ಇನ್ನೂ ಕಾಯಬೇಕಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಅದು ಹೇಳಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಲವು ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರಿಗೆ ಜಿಲ್ಲಾಡಳಿತದಿಂದ ಆಹಾರ ಮತ್ತು ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.